ಕಾಂಗ್ರೆಸ್ ಮುಕ್ತ ಮಾಡುವುದೇ ಸಿದ್ದರಾಮಯ್ಯರ ಆಶಯ: ನಳಿನ್ ಕುಮಾರ್

Update: 2019-11-21 17:17 GMT

ಚಿಕ್ಕಮಗಳೂರು, ನ.21: ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡುವುದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯವಾಗಿದೆ. ಅದನ್ನು ಅವರು ಮಾಡಿಯೇ ತೀರುತ್ತಾರೆ. ಅವರ ಕಾರಣದಿಂದಾಗಿಯೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಟೀಕಿಸಿದ್ದಾರೆ.

ಜಿಲ್ಲಾ ಬಿಜೆಪಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನೂತನ ರಾಜ್ಯಾಧ್ಯಕರ ಸನ್ಮಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮಾತು ಕಾಂಗ್ರೆಸ್‍ನಲ್ಲೇ ನಡಿಯೋಲ್ಲ, ಇನ್ನು ಬಿಜೆಪಿಯವರು ಅವರ ಮಾತಿಗೆ ತಲೆಕೆಡಿಸಿಕೊಳ್ಳಲ್ಲ. ಸಿದ್ದರಾಮಯ್ಯ ಹೀಗೆಯೇ ಏನೇನೋ ಮಾತಾಡ್ತಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತವಾಗಲೂ ಅವರೇ ಕಾರಣವಾಗುತ್ತಾರೆ ಎಂದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಂದೂ ಸತ್ಯ ಹೇಳಲಿಲ್ಲ. ಅಧಿಕಾರ ಹೋದರೂ ಅವರು ಸತ್ಯ ಹೇಳದೇ ಸುಳ್ಳನ್ನೇ ಹೇಳುತ್ತಿದ್ದಾರೆಂದು ಆರೋಪಿಸಿದ ಅವರು, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಎಸ್.ಎಂ.ಕೃಷ್ಣರನ್ನು ಪಕ್ಷದಿಂದ ಹೊರಹಾಕುವ ಕೆಲಸ ಮಾಡಿದ್ದರು, ಕೋಳಿವಾಡರನ್ನು ಸೋಲಿಸುವ ಕೆಲಸ ಮಾಡಿದ್ದರು. ಪರಮೇಶ್ವರ್ ಅವರನ್ನು ಸೋಲಿಸಲು ಏನುಬೇಕು ಎಲ್ಲವನ್ನೂ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗದಂತೆ ನೋಡಿಕೊಂಡಿದ್ದಾರೆ. ಕಾಂಗ್ರೆಸ್‍ನಲ್ಲಿ ತನ್ನದೇಯಾದ ಚಕ್ರಾಧಿಪತ್ಯ ಇರಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ಇವೆಲ್ಲವನ್ನೂ ಮಾಡಿದ್ದ ಅವರು ಈಗ ಕಾಂಗ್ರೆಸ್‍ನಲ್ಲೇ ಅವರು ಭಿನ್ನಮತ ಇರುವ ನಾಯಕರಾಗಿದ್ದಾರೆ. ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವವರು ಕಾಂಗ್ರೆಸ್‍ನಲ್ಲೇ ಇಲ್ಲ ಎಂದು ಟೀಕಿಸಿದರು.

ಕಾಗಿನೆಲೆ ಸ್ವಾಮೀಜಿಗೆ ಸಚಿವ ಮಾಧುಸ್ವಾಮಿ ಅವಹೇಳನಕಾರಿಯಾಗಿ ಮಾತನಾಡಿರುವ ವಿಚಾರ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಧುಸ್ವಾಮಿ ಪರವಾಗಿ ಮುಖ್ಯಮಂತ್ರಿಗಳೇ ಕ್ಷಮೆಯಾಚನೆ ಮಾಡಿದ್ದಾರೆ. ಇದನ್ನು ಮುಂದುವರಿಸಿದರೆ ರಾಜಕಾರಣವಾಗುತ್ತದೆ. ವಿರೋಧ ಪಕ್ಷದವರು ಇದನ್ನೇ ಇಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಜನರಿಗೆ ತಿಳಿದಿದೆ ಎಂದರು.

ಉಪಚುನಾವಣೆಯಲ್ಲಿ ಸರಿಯಾಗಿ ಕೆಲಸ ಮಾಡದ ಸಚಿವರ ತಲೆದಂಡವಾಗುತ್ತದೆ ಎಂಬ ಸಿಎಂ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಉಪಚುನಾವಣೆಯಲ್ಲಿ ನಮ್ಮದು ಸಂಘಟನಾತ್ಮಕ ಪ್ರಚಾರವಾಗಿದೆ. ಹೀಗಿದ್ದಾಗ ಯಾರಿಗೆ ತಲೆದಂಡ ಮಾಡುತ್ತಾರೆ? ಎಂದು ಪ್ರಶ್ನಿಸಿದ ಕಟೀಲ್, ತಲೆದಂಡದಂತಹ ಕ್ರಮಗಳೇನೂ ಇಲ್ಲ, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಷ್ಟೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News