ಸೇವೆಗೆ ಲಭ್ಯವಿದ್ದರೂ ಮೂಲಭೂತ ಸೌಕರ್ಯದಲ್ಲಿ ಹಿಂದೆ ಬಿದ್ದ ಹನೂರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ

Update: 2019-11-21 17:36 GMT

ಹನೂರು, ನ.21: ಸುಮಾರು 2.66 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದ್ದ ಹನೂರು ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಜನರ ಸೇವೆಗೆ ಲಭ್ಯವಾಗಿದ್ದರೂ ಇನ್ನೂ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸರ್ಕಾರ ಮತ್ತು ಜನ ಪ್ರತಿನಿಧಿಗಳು ಮರೆತಂತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಚ್ಚುವರಿ ಶೌಚಾಲಯ ಬೇಕು: ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ಇದ್ದರೂ ಸಮರ್ಪಕವಾಗಿಲ್ಲ. ಪ್ರತಿ ತಿಂಗಳೂ ಅಮವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಲಕ್ಷಾಂತರ ಜನರು ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಆ ಸಂದರ್ಭದಲ್ಲಿ ಊಟ, ತಿಂಡಿಗೆ ಬಸ್ ನಿಲುಗಡೆ ಮಾಡುವ ಸಂದರ್ಭದಲ್ಲಿ ನೂರಾರು ಜನರು ಶೌಚಾಲಯ ಬಳಸಲು ಸಾಧ್ಯವಿಲ್ಲ. ಬಸ್ ತಂಗುದಾಣದ ಖಾಲಿ ಜಾಗ ಹುಡುಕುವುದು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ.

ಕುಡಿಯುವ ನೀರಿನ ಅಲಭ್ಯತೆ: ಬಸ್ ನಿಲ್ದಾಣದಿಂದ ಪ್ರತಿ ದಿನ ನೂರಾರು ವಿದ್ಯಾರ್ಥಿಗಳು ಕೊಳ್ಳೇಗಾಲ ಪಟ್ಟಣಕ್ಕೆ ಪ್ರಯಾಣಿಸುತ್ತಾರೆ. ಮೈಸೂರು, ಬೆಂಗಳೂರು ಮತ್ತು ತಮಿಳುನಾಡಿಗೆ ನೂರಾರು ಮಂದಿ ಪ್ರಯಾಣಿಸುತ್ತಾರೆ. ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಸೌಲಬ್ಯವಿಲ್ಲದೇ ನೀರಿಗಾಗಿ ಪರಿತಪಿಸುತ್ತಾರೆ. ಹಣ ನೀಡಿ ನೀರನ್ನು ಖರೀದಿಸಬೇಕಾದ ಅನಿವಾರ್ಯತೆ ಇದೆ. ಶುದ್ಧ ಕುಡಿಯುವ ನೀರಿನ ಅನುಕೂಲ ಒದಗಿಸಿದಲ್ಲಿ ಬಡ ಪ್ರಯಾಣಿಕರ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬುವುದು ಸಾರ್ವಜನಿಕರ ಆಗ್ರಹ.

ಆಸನದ ವ್ಯವಸ್ಥೆ: ಪ್ರತಿದಿನ ಸಾವಿರಾರು ರಾಜ್ಯ ಮತ್ತು ಅಂತರಾಜ್ಯ ಪ್ರಯಾಣಿಕರು ಹನೂರು ಬಸ್ ನಿಲ್ದಾಣದ ಮುಖಾಂತರವೇ ಸಂಚರಿಸುತ್ತಾರೆ. ಹನೂರು ಬಸ್ ನಿಲ್ದಾಣದಿಂದ ತಮಿಳುನಾಡು, ಬೆಂಗಳೂರು, ಮೈಸೂರು ನಗರಗಳಿಗೆ ಹೋಗಲು ಬಸ್ ಕಾಯುವ ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಇಲ್ಲ. ಗಂಟೆಗಟ್ಟಲೆ ನಿಂತುಕೊಂಡೇ ಇರಬೇಕಾದ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಬಸ್ ನಿಲ್ದಾಣದ ಕಟ್ಟಡ 1176 ಚದರ ಮೀಟರ್ ಇದ್ದು, ಬಸ್ ನಿಲ್ಲಲು ಮತ್ತು ಚಲಿಸಲು ಸಿಮೆಂಟ್ ನೆಲಹಾಸು ಹಾಕಿದ್ದಾರೆ. ನಿಲ್ದಾಣದ ಬಹು ಭಾಗ ಸಿಮೆಂಟ್ ನೆಲಹಾಸು ಹಾಕದೆ ಇರುವುದರಿಂದ ಮಳೆ ಬಂದ ಸಂದರ್ಭ ಮಣ್ಣು ಕೆಸರಿನಂತಾಗಿ ತೊಂದರೆಯಾಗುತ್ತದೆ. ಹೀಗಾಗಿ ಸಿಮೆಂಟ್ ನೆಲಹಾಸು ಮಾಡಿದರೆ ಸುವ್ಯವಸ್ಥಿತವಾಗಿ ಬಸ್ ನಿಲುಗಡೆ ಮಾಡಲು ಅನುಕೂಲವಾಗುತ್ತದೆ ಮತ್ತು ಶೆಲ್ಟರ್ ನಿರ್ಮಾಣ ಮಾಡಿದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಆಗ್ರಹಿಸಿದ್ದಾರೆ. 

ಬೇಡಿಕೆ: ಹನೂರು ಬಸ್ ನಿಲ್ದಾಣ ಚಿಕ್ಕದಾದರೂ, ಪ್ರಯಾಣಿಕರ ಸಂಖ್ಯೆ ದೊಡ್ಡದಿದೆ. ಕೊಟ್ಯಂತರ ರೂ. ಆದಾಯ ಬರುವ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುವ ಭಕ್ತಾಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಲಕ್ಷಾಂತರ ಜನರು ವಿಶೇಷ ದಿನಗಳಲ್ಲಿ ಮಾದಪ್ಪನ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಆ ದಿನಗಳಲ್ಲಿ ಸ್ವಚ್ಚತೆ ಕಾಪಾಡುವುದು ಸವಾಲಿನ ಕೆಲಸವಾಗಿದ್ದು, ಕೇವಲ ಇಬ್ಬರು ಮಹಿಳಾ ದಿನಗೂಲಿ ನೌಕರರು ಎರಡು ವರ್ಷಗಳಿಂದ ಸ್ವಚ್ಛತಾ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ ಕೇವಲ 200 ರೂ. ನಂತೆ ಹಣ ಪಡೆಯುತ್ತಿದ್ದು, ಬೆಳಗ್ಗೆಯಿಂದ ಸಂಜೆ ತನಕ ಕೆಲಸ ಮಾಡುತ್ತಿದ್ದಾರೆ. ದಿನಗೂಲಿ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡು ಸಂಬಳ ಹೆಚ್ಚಿಸಬೇಕಾಗಿದೆ ಎಂದು ನಾಗರಿಕರು ಆಗ್ರಹಿಸುತ್ತಾರೆ.

ಹನೂರು ಬಸ್ ನಿಲ್ದಾಣ ಮೂಲಭೂತ ಸೌಕರ್ಯಗಳನ್ನು ಪಡೆದು ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲ ಮತ್ತು ಉತ್ತಮ ಸೇವೆ ಸಿಗುವಂತಾಗಲಿ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂಬುದು ಹನೂರು ನಾಗರಿಕರ ಆಗ್ರಹ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News