ನಿತ್ಯಾನಂದ ಪರಾರಿ ಪ್ರಕರಣ ವಿದೇಶಾಂಗ ಸಚಿವಾಲಯಕ್ಕೆ ಗೊತ್ತಿಲ್ಲವಂತೆ!

Update: 2019-11-22 03:51 GMT

ಹೊಸದಿಲ್ಲಿ, ನ.22: ಅಪಹರಣ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಸಚಿವಾಲಯ ಪ್ರಕಟಿಸಿದೆ.

ನಿತ್ಯಾನಂದ ಭಾರತದಿಂದ ಹೊರಗೆ ಹಾರಿದ್ದಾರೆಯೇ ಅಥವಾ ಗುಜರಾತ್ ಪೊಲೀಸರು ಅವರ ಗಡೀಪಾರಿಗೆ ಮನವಿ ಮಾಡುವ ಸಂಬಂಧ ಸಂಪರ್ಕಿಸಿದ್ದಾರೆಯೇ ಎಂಬ ಪ್ರಶ್ನೆಗೆ, ಗಡೀಪಾರು ಪ್ರಕ್ರಿಯೆಗೆ ಮನವಿ ಮಾಡಲು ಮೊದಲು ಆ ವ್ಯಕ್ತಿಯ ಇರುವಿಕೆ ಸ್ಥಳದ ಬಗ್ಗೆ ಮಾಹಿತಿ ಅಗತ್ಯ ಎಂದು ಉತ್ತರಿಸಿದೆ.

"ಅಧಿಕೃತವಾಗಿ ನಮಗೆ ಗುಜರಾತ್ ಪೊಲೀಸರಿಂದಾಗಲೀ, ಗೃಹ ಸಚಿವಾಲಯದಿಂದಾಗಲೀ ಯಾವ ಮಾಹಿತಿಯೂ ಇಲ್ಲ. ಅಂತೆಯೇ ಗಡೀಪಾರು ಮನವಿಗೆ ಆ ವ್ಯಕ್ತಿಯ ಸ್ಥಳ ಹಾಗೂ ರಾಷ್ಟ್ರೀಯತೆಯ ವಿವರಗಳು ನಮಗೆ ಬೇಕು. ನಿತ್ಯಾನಂದ ಬಗ್ಗೆ ಇದುವರೆಗೆ ಅಂಥ ಯಾವ ಮಾಹಿತಿಯೂ ಇಲ್ಲ" ಎಂದು ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಬುಧವಾರ ಅಹ್ಮದಾಬಾದ್ ಪೊಲೀಸರು ನಿತ್ಯಾನಂದ ಆಶ್ರಮದಿಂದ ಇಬ್ಬರು ಮಹಿಳಾ ಆಡಳಿತಾಧಿಕಾರಿಗಳನ್ನು ಬಂಧಿಸಿ, ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿದ್ದ ಇಬ್ಬರು ಬಾಲಕರನ್ನು ಬಿಡುಗಡೆ ಮಾಡಿದ್ದರು. ನಿತ್ಯಾನಂದ ಆಶ್ರಮದಲ್ಲಿ ತಮ್ಮ ಪುತ್ರಿಯನ್ನು ಅಕ್ರಮವಾಗಿ ಕೂಡಿಹಾಕಲಾಗಿದೆ ಎಂದು ದೂರಿ ಜನಾರ್ದನ ಶರ್ಮಾ ಎಂಬುವವರು ಸಲ್ಲಿಸಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಾಣಪ್ರಿಯ ಮತ್ತು ಪ್ರಿಯತತ್ತವ ಎಂಬುವವರನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News