ನಾಗಮಂಗಲದಲ್ಲಿ ಭೀಕರ ರಸ್ತೆ ಅಪಘಾತ: ಮೃತರ ಸಂಖ್ಯೆ 8ಕ್ಕೆ ಏರಿಕೆ

Update: 2019-11-22 16:43 GMT

ನಾಗಮಂಗಲ, ನ.22: ಗೂಡ್ಸ್ ವಾಹನ ಮತ್ತು ಟಾಟಾ ಸುಮೋ ನಡುವೆ ಢಿಕ್ಕಿ ಸಂಭವಿಸಿ 8 ಮಂದಿ ಮೃತಪಟ್ಟ ಘಟನೆ ತಾಲೂಕಿನ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಾಮೇನಹಳ್ಳಿ ಗೇಟ್ ಬಳಿ ಗುರುವಾರ ತಡರಾತ್ರಿ ನಡೆದಿದೆ.

ನಾಗಮಂಗಲ ಪಟ್ಟಣ ವಾಸಿಗಳಾದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಅಲ್ಪಸಂಖ್ಯಾತ ಯುವ ಘಟಕದ ಮಂಡ್ಯ ಜಿಲ್ಲಾದ್ಯಕ್ಷ ಮತ್ತು ವಕ್ಫ್ ಬೋರ್ಡ್ ಕಾರ್ಯದರ್ಶಿ ಮಕ್ಸೂದ್ ಪಾಷ (32), ಪಟ್ಟಣದ ಅಲ್‍ಫಲಾಹ್ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗುಜರಿ ಅಂಗಡಿ ಅಕ್ಬರ್ ಆಲಿ(40), ಉಪಾಧ್ಯಕ್ಷ ಪಂಚರ್ ಷಾಫ್ ಬಾಖರ್(53), ನಿರ್ದೇಶಕ ಟೈಲರ್ ನೌಷದ್‍ ಪಾಷ(45), ಮೆಹಬೂಬ್ ಖಾನ್(53), ಕಲೀಲ್ ಉಲ್ಲಾ ಖಾನ್ ಪತ್ನಿ ಹಸೀನ್ ತಾಜ್(62), ಮುಹಮ್ಮದ್ ಖಲೀಂ ಉಲ್ಲಾ ಪತ್ನಿ ಶಾಹಿದಾ ಖಾನಂ(54) ಹಾಗೂ ತಾಹೀರ್ ಪಾಷ ಅಲ್ತಾಫ್ ಪಾಷ(32) ಸಾವನ್ನಪ್ಪಿದವರು.

ಮೃತರೆಲ್ಲರೂ ಪಟ್ಟಣದ ಅಲ್‍ ಫಲಾಹ್ ಸಹಕಾರ ಬ್ಯಾಂಕ್‍ನ ಆಡಳಿತ ಮಂಡಳಿ ನಿರ್ದೇಶಕರಾಗಿದ್ದಾರೆ. ಯಶಸ್ವಿ 5 ವರ್ಷದ ತಮ್ಮ ಆಡಳಿತ ಅವಧಿ ಗುರುವಾರಕ್ಕೆ ಮುಗಿದ ಹಿನ್ನೆಲೆಯಲ್ಲಿ ಅಂದು ಸಂಜೆ ಸಂಘದ ಶಾಖೆಯಲ್ಲಿ ಸಭೆ ಸೇರಿ ಔತಣ ಕೂಟಕ್ಕೆ ತೆರಳಲು ತೀರ್ಮಾನಿಸಿದ್ದರು ಎನ್ನಲಾಗಿದೆ. 10 ನಿರ್ದೇಶಕರಿದ್ದ ಸುಮೋ ಬೆಳ್ಳೂರು ಕಡೆಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಗೂಡ್ಸ್ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಮುಖಾಮುಖಿ ಢಿಕ್ಕಿಯಾಗಿದೆ.

ಗೂಡ್ಸ್ ವಾಹನ ಪಟ್ಟಣದ ಸ್ಟಾರ್ ಫೌಲ್ಟ್ರಿ ಫಾರಂ ಉದ್ಯಮಿಗೆ ಸೇರಿದ್ದು ಎನ್ನಲಾಗಿದ್ದು, ಅಪಘಾತದ ರಭಸಕ್ಕೆ ಸುಮೋ ವಾಹನ ಸಂಪೂರ್ಣ ನಜ್ಜುಗುಜ್ಜಾಗಿ ಸ್ಥಳದಲ್ಲೆ 6 ಮಂದಿ ಸಾವನ್ನಪ್ಪಿ, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಸಾದಿಕ್ ಮತ್ತು ಅಮ್ಜದ್ ಎಂಬವರಿಗೆ ಬೆಳ್ಳೂರಿನ  ಬಿ.ಜಿ.ನಗರ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ನಜ್ಜುಗುಜ್ಜಾದ ವಾಹನಗಳನ್ನು ಜೆಸಿಬಿ ಯಂತ್ರದಿಂದ ಬೇರ್ಪಡಿಸಿ ಸುಗಮ ಸಂಚಾರಕ್ಕೆ ಪೋಲಿಸರು ಅನುವು ಮಾಡಿಕೊಟ್ಟರು. ಈ ಸಂಬಂದ ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮೂಹಿಕ ದಫನ್: ಮೃತದೇಹಗಳನ್ನು ಮೈಸೂರು ರಸ್ತೆಯಲ್ಲಿನ ಸ್ಟಾರ್ ಪೆಟ್ರೋಲ್ ಬಂಕ್ ಬಳಿಯ ಮೈದಾನದಲ್ಲಿ ಇರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ, ಕೆ.ಮಲ್ಲೆನಹಳ್ಳಿ ಬಳಿ ಇರುವ ಸ್ಮಶಾನದಲ್ಲಿ ಸಾಮೂಹಿಕವಾಗಿ ದಫನ್ ಮಾಡಲಾಯಿತು.

ಶಾಸಕರಾದ ಸುರೇಶ್‍ಗೌಡ, ಅಪ್ಪಾಜಿಗೌಡ, ಮಾಜಿ ಶಾಸಕ ಚಲುವರಾಯಸ್ವಾಮಿ ಸೇರಿದಂತೆ ಇತರೆ ಗಣ್ಯರು ಆಗಮಿಸಿ ಮೃತರ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಪಟ್ಟಣದ ಮಂಡ್ಯ ರಸ್ತೆಯಲ್ಲಿ ಅಂಗಡಿ ಮುಂಗಟ್ಟು ಮುಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕುಟುಂಬಸ್ಥರ ಗೋಳಾಟ ಮನಕಲಕುವಂತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News