ನಿಮ್ಮ ಮಾತು ನಿಜ, ನಾನು ನಿಮ್ಮಷ್ಟು ಬುದ್ಧಿವಂತನಲ್ಲ: ಸಿದ್ದು ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು

Update: 2019-11-22 17:00 GMT

ಬಳ್ಳಾರಿ(ಹೊಸಪೇಟೆ), ನ. 22: ‘ದಲಿತ ಮುಖಂಡರನ್ನು ಬೆಳೆಸುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡಲಿಲ್ಲ. ನಾನು ಪಕ್ಷ ಮತ್ತು ನನ್ನ ಜನತೆ ಆಶೀರ್ವಾದದಿಂದ ಬೆಳೆದಿದ್ದೇನೆ. ಪಕ್ಷ ನನಗೆ ನೀಡಿದ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಆದರೆ, ನಿಮ್ಮ ಪಕ್ಷ ನಿಮಗೆ ಏನು ಹೊಣೆ ನೀಡಿದೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಇಂದಿಲ್ಲಿ ಪ್ರಶ್ನಿಸಿದ್ದಾರೆ.

ಶುಕ್ರವಾರ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಪರ ಪ್ರಚಾರದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಿರಿಯರು. ಶ್ರೀರಾಮುಲುಗೆ ಡಿಸಿಎಂ ಸ್ಥಾನ ಸಿಕ್ಕಲ್ಲ ಎಂದು ಹೇಳುವ ನೀವು ಶ್ರೀರಾಮುಲು ಪೆದ್ದ ಎಂದು ಏಕೆ ಹೇಳ್ತೀರಿ. ನಿಮ್ಮ ಮಾತು ನಿಜ. ನಾನು ನಿಮ್ಮಷ್ಟು ಬುದ್ಧಿವಂತನಲ್ಲ ಎಂದು ಹೇಳಿದರು.

ನಮ್ಮ-ನಿಮ್ಮ ನಡುವಿನ ಈ ಹೇಳಿಕೆಗಳು ಯಾವುದೇ ಕಾರಣಕ್ಕೂ ಜಾತಿ-ಜಾತಿಗಳ ಮಧ್ಯೆ ಹೋಗುವುದು ಬೇಡ ಎಂದು ಮನವಿ ಮಾಡಿದ ಶ್ರೀರಾಮುಲು, ನಮ್ಮ-ನಿಮ್ಮ ವೈಯಕ್ತಿಕ ನೆಲೆಯಲ್ಲಿಯೇ ಇವೆಲ್ಲವೂ ಇರಲಿ ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಸಿದ್ದರಾಮಯ್ಯ ಏನು ಎನ್ನುವುದನ್ನು ಅವರ ಶಿಷ್ಯರೇ ಹೇಳುತ್ತಿದ್ದಾರೆ. ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್ ಹಾಗೂ ಮುನಿರತ್ನ ಅವರೇ ಎಲ್ಲವನ್ನೂ ಹೇಳಿದ್ದಾರೆ. ಈ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ ಎಂದು ಶ್ರೀರಾಮುಲು ಟೀಕಿಸಿದರು.

ನಿಮ್ಮ ಮಾತಿನಂತೆ ನಾನು ಪೆದ್ದ ನಿಜ. ಆದರೆ, ಭ್ರಷ್ಟಾಚಾರ, ನಂಬಿಕೆ ದ್ರೋಹ, ವಂಚನೆ ಮಾಡುವುದರಲ್ಲಿ ನಾನು ಪೆದ್ದ. ಆ ವಿಚಾರದಲ್ಲಿ ಸಿದ್ದರಾಮಯ್ಯನವರಷ್ಟು ಬುದ್ದಿವಂತ ನಾನಲ್ಲ ಎಂದು ಲೇವಡಿ ಮಾಡಿದ ಶ್ರೀರಾಮುಲು, ಕಾಂಗ್ರೆಸ್ ಆಡಳಿತದಲ್ಲಿರುವ ವೇಳೆ ಏನೇನು ಭ್ರಷ್ಟಾಚಾರ ನಡೆದಿದೆ ರಾಜ್ಯದ ಜನರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಹಳ ಬುದ್ಧಿವಂತರಾದ ಸಿದ್ದರಾಮಯ್ಯನವರು ಎಷ್ಟು ಮಂದಿ ನಾಯಕರನ್ನು ಬೆಳೆಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಏನಾಗಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಇವತ್ತು ಸಿದ್ದರಾಮಯ್ಯರ ಜತೆ ಡಾ.ಜಿ.ಪರಮೇಶ್ವರ್. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಸಹಿತ ಯಾರೂ ಇಲ್ಲ ಎಂದು ದೂರಿದರು.

ಸಿದ್ದರಾಮಯ್ಯನವರೇ, ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳುವುದರಲ್ಲಿ, ನಂಬಿಸಿ ಕತ್ತು ಕೊಯ್ಯುವುದರಲ್ಲಿ, ತಾನು ಬೆಳೆಯಲು ಇನ್ನೊಬ್ಬನನ್ನು ನಾಶ ಮಾಡುವುದರಲ್ಲಿ ನಿಮ್ಮಂತೆ ನಾನು ಬುದ್ಧಿವಂತನಲ್ಲ. ಇನ್ನೊಬ್ಬರಿಗೆ ಅನ್ಯಾಯ ಮಾಡುವುದೇ ಬುದ್ಧಿವಂತಿಕೆ ಎನ್ನುವ ನಿಮಗೆ ನಾನು ಪೆದ್ದನಂತೆ ಕಾಣುವುದು ಸಹಜ

-ಬಿ.ಶ್ರೀರಾಮುಲು, ಆರೋಗ್ಯ ಸಚಿವ

‘ಸಿದ್ದರಾಮಯ್ಯನವರೇ, ನರೇಂದ್ರ ಮೋದಿ, ಅಮಿತ್ ಶಾ ಹೆಸರು ಎಳೆತಂದು ದೊಡ್ಡವರಾಗುವ ಯೋಚನೆ ಬೇಡ. ಹಸಿ ಸುಳ್ಳು ಬಿಟ್ಟು ಸತ್ಯ ಹೇಳಿ. ಆಗದಿದ್ದರೆ ಸತ್ಯಕ್ಕೆ ಸಮೀಪವಾದರೂ ಮಾತನಾಡಿ. ಆಗ ಯಾರೂ ನಿಮ್ಮ ಮೇಲೆ ಮುಗಿಬೀಳುವುದಿಲ್ಲ. ಮುಗಿಬೀಳುತ್ತಾರೆ ಎಂಬ ಭಯವನ್ನು ನೀವು ಬಿಡಿ’

-ಬಿ.ಶ್ರೀರಾಮುಲು, ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News