ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನ: ಯಡಿಯೂರಪ್ಪ ಭರವಸೆ

Update: 2019-11-22 13:57 GMT

ಕಲಬುರಗಿ, ನ.22: ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ. 

ಶುಕ್ರವಾರ ಕಲಬುರಗಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 2ನೇ ಅತಿ ಉದ್ದದ ರನ್‌ವೇಯನ್ನು ಕಲಬುರಗಿ ವಿಮಾನ ನಿಲ್ದಾಣವು ಹೊಂದಿದ್ದು, ಇಲ್ಲಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಶಕೆ ಆರಂಭವಾಗಲಿದೆ ಎಂದು ಆಶಿಸಿದರು.

 2008ರಲ್ಲಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿತ್ತು. ಎರಡು ವರ್ಷದ ಹಿಂದೆಯೇ ಈ ಯೋಜನೆ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾರಣಾಂತರಗಳಿಂದ ತಡವಾಯಿತು. ಇವತ್ತು ವಿಮಾನ ನಿಲ್ದಾಣವನ್ನು ಉದ್ಘಾಟಿಸುತ್ತಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಕಲಬುರಗಿಗೆ ಸಂಬಂಧಿಸಿದ ಅಭಿವೃದ್ಧಿಯನ್ನು ಚಾಚೂತಪ್ಪದೆ ಮಾಡುತ್ತೇನೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ನೀಡಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಲಬುರಗಿ ವಿಮಾನ ನಿಲ್ದಾಣದಿಂದ ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕೆ, ವ್ಯವಹಾರಗಳ ವೃದ್ಧಿಗೆ, ಕೃಷಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ. ಈಗ ಕಲಬುರಗಿ-ಬೆಂಗಳೂರು-ಕಲಬುರಗಿ ವಿಮಾನ ಕಾರ್ಯಾಚರಣೆ ಪ್ರಾರಂಭವಾಗಲಿದೆ. ನಂತರದ ದಿನಗಳಲ್ಲಿ ಇತರೆ 2 ಮಾರ್ಗಗಳಲ್ಲಿ ಕಾರ್ಯಾಚರಣೆ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.

ಅನುಚ್ಛೇಧ 371-ಜೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಡಳಿಗೆ ಕಳೆದ 2013-14ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಒಟ್ಟು 6,253.50ಕೋಟಿ ರೂ.ಅನುದಾನ ಹಂಚಿಕೆ ಮಾಡಲಾಗಿದೆ. ಇದೂವರೆಗೆ 4,428.97ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದ್ದು, 4,047.78ಕೋಟಿ ರೂ.ಅನುದಾನ ವೆಚ್ಚವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಸುಸಂಗೋಪನಾ ಸಚಿವ ಪ್ರಭು ಚೌವ್ಹಾಣ್, ಸಂಸದ ಡಾ.ಉಮೇಶ ಜಾಧವ, ಬೀದರ ಸಂಸದ ಭಗವಂತ ಖೂಬಾ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ವಿಧಾನಸಭೆ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಎಂ.ವೈ.ಪಾಟೀಲ, ಸುಭಾಷ ಗುತ್ತೆದಾರ, ಅವಿನಾಶ ಜಾಧವ, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ಮಾಜಿ ಶಾಸಕರಾದ ಮಾಲಿಕಯ್ಯ ಗುತ್ತೆದಾರ, ಬಾಬುರಾವ ಚಿಂಚನಸೂರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News