ಪ್ರಚಾರ ಕಣದಲ್ಲಿ ಸಿದ್ದರಾಮಯ್ಯ ಏಕಾಂಗಿಯಲ್ಲ: ದಿನೇಶ್‌ ಗುಂಡೂರಾವ್

Update: 2019-11-22 14:02 GMT

ಬೆಂಗಳೂರು, ನ.22: ಉಪ ಚುನಾವಣೆಯ ಪ್ರಚಾರ ಕಣದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಏಕಾಂಗಿಯಲ್ಲ. ನಾಳೆಯಿಂದ ಎಲ್ಲ ಹಿರಿಯ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಏಕಾಂಗಿಯಲ್ಲ. ಕಾಂಗ್ರೆಸ್ ಪಕ್ಷದ ಹಲವು ನಾಯಕರು ಈಗಾಗಲೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.

15 ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ಕೈಗೊಳ್ಳಬೇಕಿರುವುದರಿಂದ, ನಾಯಕರಿಗೆ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ. ಕ್ಷೇತ್ರವಾರು ಅವರು ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯವರಿಗೆ ಅನಗತ್ಯ ಆರೋಪಗಳನ್ನು ಮಾಡುವುದು ಬಿಟ್ಟರೆ ಬೇರೆ ಕೆಲಸವಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಎಂ.ಬಿ.ಪಾಟೀಲ್. ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್, ಈಶ್ವರ್ ಖಂಡ್ರೆ, ಡಾ.ಎಚ್.ಸಿ.ಮಹದೇವಪ್ಪ, ಧ್ರುವನಾರಾಯಣ್, ಸತೀಶ್ ಜಾರಕಿಹೊಳಿ, ರಮೇಶ್ ಕುಮಾರ್ ಸೇರಿದಂತೆ ಇನ್ನಿತರ ಮುಖಂಡರು ಈಗಾಗಲೇ ಚುನಾವಣಾ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಇನ್ನಿತರ ಪ್ರಮುಖ ನಾಯಕರು ಪ್ರಚಾರದಲ್ಲಿ ಪಾಲ್ಗೊಳ್ಳುವ ಸಂಬಂಧ ದಿನಾಂಕಗಳನ್ನು ನೀಡಿದ್ದಾರೆ. ಅದರಂತೆ ನಾವು ಕಾರ್ಯಕ್ರಮವನ್ನು ರೂಪಿಸುತ್ತೇವೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಎಲ್ಲ ಮುಖಂಡರು ಒಗ್ಗಟ್ಟಾಗಿ ಮುಂದುವರೆಯುತ್ತಿದ್ದಾರೆ. ಬಿಜೆಪಿಯವರು ಮಾಡುವ ಟೀಕೆಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಉಪ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲಬೇಕು ಎಂಬುದು ನಮ್ಮ ಗುರಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮಹಾರಾಷ್ಟ್ರದಲ್ಲಿ ಸರಕಾರ ರಚನೆಯ ಬಿಕ್ಕಟ್ಟು ಮುಂದುವರೆದಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜೊತೆ ಇಂದು ಆಯೋಜಿಸಲಾಗಿದ್ದ ಸಭೆಯನ್ನು ಮುಂದೂಡಲಾಗಿದೆ. ನಾಳೆ ಅವರು ಬೆಂಗಳೂರಿಗೆ ಬರುವ ಸಾಧ್ಯತೆಯಿದ್ದು, ಆನಂತರ ಸಭೆಯನ್ನು ನಿಗದಿಪಡಿುತ್ತೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News