ಸಚಿವ ಮಾಧುಸ್ವಾಮಿ ಹೇಳಿಕೆಗೆ ಸರಕಾರಕ್ಕೆ 10 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್

Update: 2019-11-22 16:57 GMT

ಬೆಂಗಳೂರು, ನ.22: ನ್ಯಾಯಮೂರ್ತಿಗಳಿಂದ ವ್ಯಾಜ್ಯ ವಿಳಂಬ ಎಂಬ ಹೇಳಿಕೆ ನೀಡಿದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಪರವಾಗಿ ರಾಜ್ಯ ಸರಕಾರ 10 ಸಾವಿರ ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ. ಪ್ರಕರಣವೊಂದರಲ್ಲಿ ಸಮಯ ಕೇಳಿದ ಸರಕಾರಿ ವಕೀಲರಿಗೆ 10 ಸಾವಿರ ರೂ.ದಂಡ ಹಾಕಿದೆ.

ಸರಕಾರದ ವ್ಯಾಜ್ಯಗಳ ವಿಲೇವಾರಿ ವಿಳಂಬಕ್ಕೆ ನ್ಯಾಯಮೂರ್ತಿಗಳು ದಿನಾಂಕ ನೀಡುತ್ತಾ ಹೋಗುವುದೇ ಕಾರಣ ಎಂದು ಮಾಧುಸ್ವಾಮಿ ಹೇಳಿದ್ದರು. ಕಾನೂನು ಮಂತ್ರಿಗಳು ಈ ರೀತಿ ಹೇಳಿಕೆ ನೀಡಿರುವುದು ಬೇಜವಾಬ್ದಾರಿಯದ್ದು ಎಂದು ಹೈಕೋರ್ಟ್ ಕಿಡಿಕಾರಿತ್ತು.

ಘಟನೆ ಹಿನ್ನೆಲೆ: 2012ರಲ್ಲಿ ಸಲ್ಲಿಸಲಾದ ರಿಟ್ ಅರ್ಜಿಯೊಂದು, ನ.20ರಂದು ನ್ಯಾ.ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವಿಚಾರಣೆ ವೇಳೆ ಸರಕಾರದ ಪರ ವಕೀಲರು ಇನ್ನಷ್ಟು ಸಮಯಾವಕಾಶಬೇಕೆಂದು ಕೋರಿದರು. ಇದಕ್ಕೆ ಗರಂ ಆದ ನ್ಯಾಯಮೂರ್ತಿಗಳು ಹೊರಗೆ ನಿಮ್ಮ ಕಾನೂನು ಮಂತ್ರಿಗಳು ಬಹಿರಂಗವಾಗಿ ವೇದಿಕೆಗಳಲ್ಲಿ, ಸರಕಾರಿ ವ್ಯಾಜ್ಯಗಳ ವಿಲೇವಾರಿ ವಿಳಂಬಕ್ಕೆ ನ್ಯಾಯಮೂರ್ತಿಗಳು ದಿನಾಂಕ ನೀಡಿ ಮುಂದೂಡುವುದೆ ಕಾರಣ ಎನ್ನುತ್ತಾರೆ. ಆದರೆ, ಕೋರ್ಟ್‌ನಲ್ಲಿ ಸರಕಾರದ ಪರ ವಕೀಲರು ಸಮಯಾವಕಾಶ ಬೇಕೆಂದು ಕೋರುತ್ತೀರಿ ಎಂದು ಮೌಖಿಕವಾಗಿ ತರಾಟೆಗೆ ತೆಗೆದುಕೊಂಡರು. ಎಲ್ಲಾ ನ್ಯಾಯಮೂರ್ತಿ 365 ದಿನ ಕೆಲಸ ಮಾಡಲು ತಯಾರಿದ್ದಾರೆ. ನಮ್ಮ ಬದ್ಧತೆಯ ಬಗ್ಗೆ ಯಾರಿಗೂ ಅನುಮಾನ ಬೇಡ. ಸಚಿವರು ಜವಾಬ್ದಾರಿ ಅರಿತು ಹೇಳಿಕೆ ನೀಡಬೇಕೆಂದು ಎಚ್ಚರಿಕೆ ನೀಡಿ 2012ರಲ್ಲಿ ಸಲ್ಲಿಸಲಾದ ರಿಟ್ ಪ್ರಕರಣವನ್ನು ನ.22ಕ್ಕೆ ಮುಂದೂಡಿತ್ತು. 

ಅದೇ ಪ್ರಕರಣವನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಕೋರ್ಟ್, ಸಮಯ ಕೇಳಿದ್ದ ಸರಕಾರಿ ಪರ ವಕೀಲರಿಗೆ 10 ಸಾವಿರ ರೂ.ದಂಡ ವಿಧಿಸಿದೆ. ಮೊದಲಿಗೆ 1 ಲಕ್ಷ ರೂ. ದಂಡ ಹಾಕಿತ್ತು. ವಕೀಲರ ಮನವಿಯ ನಂತರ ದಂಡವನ್ನು 10 ಸಾವಿರಕ್ಕೆ ಇಳಿಕೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News