ಮೇಲ್ವಿಚಾರಣಾ ಸಮಿತಿ ರಚಿಸದ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ: ಹೈಕೋರ್ಟ್ ಎಚ್ಚರಿಕೆ

Update: 2019-11-22 17:21 GMT

ಬೆಂಗಳೂರು, ನ.22: ಖಾಸಗಿ ಟಿ.ವಿ.ವಾಹಿನಿಗಳು ಪ್ರಸಾರ ಮಾಡುವ ಕೀಳು ಅಭಿರುಚಿಯ ಕಾರ್ಯಕ್ರಮಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲು ನೀಡಿದ್ದ ಆದೇಶ ಪಾಲಿಸದ ರಾಜ್ಯ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾಗಿ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಿಲ್ಲವೆಂದು ಆರೋಪಿಸಿ ಗೀತಾಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸರಕಾರಕ್ಕೆ ಎಚ್ಚರಿಕೆ ನೀಡಿತು. 2008ರಲ್ಲಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶದಂತೆ ರಾಜ್ಯ ಸರಕಾರವು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಗಳನ್ನು ರಚನೆ ಮಾಡಬೇಕು. ಒಂದು ವೇಳೆ ಈವರೆಗೆ ಸಮಿತಿಗಳನ್ನು ರಚನೆ ಮಾಡದಿದ್ದರೆ, ನ್ಯಾಯಾಲಯದ ಈ ಆದೇಶ ಪ್ರತಿ ಸಿಕ್ಕ ಬಳಿಕ ಆರು ವಾರಗಳಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚನೆ ಮಾಡಬೇಕು ಎಂದು ನ್ಯಾಯಪೀಠ ಸರಕಾರಕ್ಕೆ ಆದೇಶಿಸಿತ್ತು. ಆದರೆ, ರಾಜ್ಯ ಸರಕಾರ ಇನ್ನೂ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿತು.

ಟಿ.ವಿ. ವಾಹಿನಿಗಳಲ್ಲಿ ಆಕ್ಷೇಪಾರ್ಹ ಸುದ್ದಿ ಪ್ರಸಾರವಾದ ಬಗ್ಗೆ ಜಿಲ್ಲಾ ಮಟ್ಟದಲ್ಲಿ ದೂರು ಸ್ವೀಕಾರ ಘಟಕ ರಚಿಸಬೇಕು. ಆ ಘಟಕಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಸಲ್ಲಿಕೆಯಾದ ದೂರುಗಳ ಬಗ್ಗೆ ನೋಡಲ್ ಅಧಿಕಾರಿಗಳು ಪ್ರತಿ ತಿಂಗಳು ಚರ್ಚೆ ಮಾಡಬೇಕು. ಸಮಿತಿಗಳನ್ನು ರಚನೆ ಮಾಡಿರುವ ಬಗ್ಗೆ ಜಾಹೀರಾತು ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಈ ಹಿಂದೆ ನ್ಯಾಯಪೀಠವು ಆದೇಶಿಸಿತ್ತು. ಅರ್ಜಿಯಲ್ಲಿ ಧಾರಾವಾಹಿ ಸೇರಿದಂತೆ ಟಿ.ವಿ.ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ದೃಶ್ಯ ಸಿನಿಮಾ ದೃಶ್ಯಗಳಿಗಿಂತ ಅಸಭ್ಯ ಹಾಗೂ ಕೀಳುಮಟ್ಟದ ಅಭಿರುಚಿಯಿಂದ ಕೂಡಿರುತ್ತವೆ. ಅವು ಸೆನ್ಸಾರ್‌ಗೊಳಪಡದೇ ಪ್ರಸಾರವಾಗುತ್ತವೆ. ಅವುಗಳ ಮೇಲ್ವಿಚಾರಣೆ ನಡೆಸದೇ ಇರುವುದರಿಂದ ಸಮಾಜದ ಸ್ವಾಸ್ಥ್ಯ ಹಾಗೂ ಸಾಮರಸ್ಯ ಹಾಳಾಗುತ್ತಿದೆ ಎಂದು ದೂರಲಾಗಿದೆ. ಅರ್ಜಿದಾರರ ಪರವಾಗಿ ಜಿ.ಆರ್.ಮೋಹನ್ ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News