ಎನ್‌ಡಿಆರ್‌ಎಫ್ ಮಾದರಿಯಲ್ಲಿ ವಿಪತ್ತು ನಿರ್ವಹಣಾ ಕೇಂದ್ರಗಳ ಸ್ಥಾಪನೆ: ಸಚಿವ ಆರ್.ಅಶೋಕ್

Update: 2019-11-22 17:31 GMT

ಬೆಂಗಳೂರು, ನ.22: ರಾಜ್ಯದಲ್ಲಿ ಪ್ರವಾಹ ಹಾಗೂ ನೈಸರ್ಗಿಕ ವಿಕೋಪಗಳ ಸಂದರ್ಭಗಳಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗೆ ಎನ್‌ಡಿಆರ್‌ಎಫ್ ಮಾದರಿಯಲ್ಲಿ ವಿಪತ್ತು ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಶುಕ್ರವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರವಾಹ ಹಾಗೂ ವಿಪತ್ತು ಸಂದರ್ಭಗಳಲ್ಲಿ ಎನ್‌ಡಿಆರ್‌ಎಫ್ ತಂಡಗಳು ಬರುವ ಮುನ್ನವೇ ಈ ಕೇಂದ್ರಗಳು ಕಾರ್ಯಕ್ಕೆ ಇಳಿಯಲಿವೆ ಎಂದರು.

ಈ ತಂಡಗಳಿಗೆ ಅಗತ್ಯವಿರುವ ಉಪಕರಣ ಮತ್ತು ಸಾಧನಗಳನ್ನು ಖರೀದಿಸಲು ಕೇಂದ್ರದಿಂದ ನೆರವು ಕೋರಲಾಗಿದೆ. ಈ ತಂಡಗಳಿಗೆ ತರಬೇತಿ ಪಡೆದ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. 19 ಇಲಾಖೆಗಳಿಗೆ ಒಂದೊಂದು ತಂಡವನ್ನು ಸಂಯೋಜಿಸಲಾಗುವುದು ಎಂದು ಅಶೋಕ್ ಹೇಳಿದರು.

ಬಿಜೆಪಿ ಸರಕಾರವು ನೆರೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದೆ. 103 ತಾಲೂಕುಗಳಿಗೆ 2948 ಕೋಟಿ ರೂ.ಪರಿಹಾರ ಬಿಡುಗಡೆ ಮಾಡಿದೆ. ಸಂತ್ರಸ್ತರಿಗೆ ಈಗಾಗಲೇ ತಲಾ 10 ಸಾವಿರ ರೂ.ನೀಡಿದ್ದು, ಹಾನಿಗೊಳಗಾದ ಮನೆಗಳಿಗೆ ತಲಾ ಒಂದು ಲಕ್ಷ ರೂ.ನೀಡಲಾಗಿದೆ. ಪರಿಹಾರವನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ಸಂತ್ರಸ್ತರಿಗೆ ತಲುಪಿಸಲಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ವಕ್ತಾರರಾದ ಅಶ್ವಥ್ ನಾರಾಯಣ, ರಾಜ್ಯ ಮಾಧ್ಯಮ ಸಂಚಾಲಕರಾದ ಎ.ಎಚ್.ಆನಂದ್, ಸಹ ವಕ್ತಾರ ಎಸ್.ಪ್ರಕಾಶ್, ಅನರ್ಹ ಶಾಸಕ ಮುನಿರತ್ನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News