ರಾಜ್ಯದಲ್ಲಿ ಅನಧಿಕೃತ ಜಾಹೀರಾತುಗಳು ಇರದಂತೆ ಕ್ರಮ ಕೈಗೊಳ್ಳಲು ಹೈಕೋರ್ಟ್ ಆದೇಶ

Update: 2019-11-22 17:45 GMT

ಬೆಂಗಳೂರು, ನ.22: ಕೆಓಪಿ ಕಾಯ್ದೆ-1981ರ ಅನ್ವಯ ರಾಜ್ಯದ ಎಲ್ಲ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯಾವುದೇ ಬಗೆಯ ಅನಧಿಕೃತ ಜಾಹೀರಾತುಗಳು ಇರದಂತೆ ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಹಾಗೂ ಅಕ್ರಮ ಜಾಹೀರಾತು ಅಳವಡಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಈ ಕುರಿತು ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ತೆರವುಗೊಳಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ನ್ಯಾಯಪೀಠವು, ಅನಧಿಕೃತ ಜಾಹೀರಾತುಗಳು ಎಂದು ಕಂಡು ಬಂದರೆ ಅವುಗಳನ್ನು ಹಾಕಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕೆಎಂಸಿ ಕಾಯ್ದೆ ಸೆಕ್ಷನ್ 135ರ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಜಾಹೀರಾತು ಅಳವಡಿಸುವವರ ಬಳಿ ಲೈಸೆನ್ಸ್ ಇರಬೇಕು. ಹಾಗೊಂದು ವೇಳೆ ಲೈಸೆನ್ಸ್ ಇಲ್ಲದೆ ಜಾಹೀರಾತುಗಳನ್ನು ಅಳವಡಿಸಿದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಿ 6 ತಿಂಗಳು ಕಾರಾಗೃಹ ಶಿಕ್ಷೆ, 1 ಸಾವಿರ ರೂ.ದಂಡ ವಿಧಿಸಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ.

ಸೆಕ್ಷನ್ 138ರ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತ ಜಾಹೀರಾತುಗಳನ್ನು ಅಳವಡಿಸಿದ್ದು, ಗಮನಕ್ಕೆ ಬಂದರೆ ತಕ್ಷಣ ಅವರಿಗೆ ಪಾಲಿಕೆ ಆಯುಕ್ತರು ಶೋಕಾಸ್ ನೋಟಿಸ್ ಜಾರಿಗೊಳಿಸಬೇಕು. ಹಾಗೂ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಬೇಕು. ಕೆಎಂಸಿ ಕಾಯ್ದೆ ಸೆಕ್ಷನ್ 137 ಅಡಿಯಲ್ಲಿ ಜಾಹೀರಾತು ಅಳವಡಿಸಲು ಅನುಮತಿ ಪಡೆದಿದ್ದರೆ ಅಂಥವರಿಗೆ ಅವಕಾಶ ನೀಡಬೇಕು. ಅನುಮತಿ ಪಡೆಯದೆ ಜಾಹೀರಾತು ಅಳವಡಿಸಿದ್ದರೆ ತೆರವುಗೊಳಿಸಬೇಕೆಂದು ನ್ಯಾಯಪೀಠವು ನಿರ್ದೇಶಿಸಿತು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳ ಬಗ್ಗೆ ಮೊದಲು ಸಮೀಕ್ಷೆ ನಡೆಸಬೇಕು. ಆಮೇಲೆ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು. ಅಲ್ಲದೆ, ವಿಧಾನಸೌಧದ ಮುಂದೆ ಬಿಬಿಎಂಪಿ ಅನುಮತಿ ಇಲ್ಲದೆ ಜಾಹೀರಾತು ಹಾಕಿದ್ದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ನಿರ್ದೇಶಿಸಿದೆ. ಜಾಹೀರಾತು ವಿರುದ್ಧ ಕೈಗೊಳ್ಳುವ ಕ್ರಮದ ವಿಚಾರವಾಗಿ ಡಿ.13ರಂದು ಬಿಬಿಎಂಪಿ ಆಕ್ಷೇಪಣೆ ಸಲ್ಲಿಸಬೇಕು ಎಂದು ನ್ಯಾಯಪೀಠವು ಮುಂದಿನ ವಿಚಾರ ಣೆಯನ್ನು ಡಿ.16ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News