ಪಕ್ಷಾಂತರಿಗಳನ್ನು ಸೋಲಿಸಲು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಕರೆ

Update: 2019-11-22 18:02 GMT

ಮಂಡ್ಯ, ನ.22: ಹದಿನೈದು ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಗೆ ಕಾರಣವಾಗಿರುವ ಪಕ್ಷಾಂತರ ಮಾಡಿರುವ ಎಲ್ಲಾ ಅಭ್ಯರ್ಥಿಗಳನ್ನು ಸೋಲಿಸಬೇಕೆಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮನವಿ ಮಾಡಿದ್ದಾರೆ.

ಮಳವಳ್ಳಿ ತಾಲೂಕು ಹಲಗೂರಿನ ಬಿಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಅವರು, ಲಕ್ಷಾಂತರ ಮತದಾರರು, ಮುಖಂಡರ ಭಾವನೆಗಳಿಗೆ ಬೆಲೆ ನೀಡದೇ ಹದಿನೈದು ಕ್ಷೇತ್ರದ ಶಾಸಕರು ಹಣದ ವ್ಯಾಮೋಹಕ್ಕೆ ಸಿಲುಕಿ ಪಕ್ಷಾಂತರ ಮಾಡಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ. ಪಕ್ಷದಿಂದ ಬಿ.ಫಾರಂ ಪಡೆದ ಪಕ್ಷಕ್ಕೆ ದ್ರೋಹ ಬಗೆದಿರುವ ಅಭ್ಯರ್ಥಿಗಳನ್ನು ಈ ಬಾರಿ ಸೋಲಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದರು.

ಈ ಉಪಚುನಾವಣೆಯಲ್ಲಿ ಬಳಸಲಿರುವ ಇವಿಎಂ ಯಂತ್ರಗಳ ಮೇಲೆ ನಮಗೆ ವಿಶ್ವಾಸವಿಲ್ಲ. ಕೋಟಿ ಕೋಟಿ ಹಣದ ಹೊಳೆಯನ್ನು ಹರಿಸುವ, ಚುನಾವಣಾ ಅಧಿಕಾರಿಗಳು ಸಹ ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡುವ ಅನುಮಾನಗಳಿದ್ದು ಬಿಜೆಪಿಗೆ ಪ್ರತಿಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಕಡಿವಾಣ ಹಾಕಬೇಕು ಎಂದು ಅವರು ಹೇಳಿದರು.

ರಾಜ್ಯದ ನೆರೆಗೆ ಸಿಲುಕಿ ಜನರು ಇನ್ನೂ ಗಂಜಿ ಕೇಂದ್ರಗಳಲ್ಲಿ ಕಾಲ ತಳ್ಳುವಂತಾಗಿದೆ. ಪರಿಹಾರ ನೀಡದ ಕೇಂದ್ರ ಮತ್ತು ರಾಜ್ಯ ಸರಕಾರ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರ ಮನಸ್ಸಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ, ಟಿಪ್ಪು ಸುಲ್ತಾನ್ ಮತಾಂಧ ಎಂಬ ಹೇಳಿಕೆಗಳನ್ನು ನೀಡಿ ಜನರ ಮನಸ್ಸಿನಲ್ಲಿ ಭಾವನಾತ್ಮಕ ವಿಚಾರಗಳನ್ನು ಬಿತ್ತಿ ಚುನಾವಣೆ ಎದುರಿಸುತ್ತಿರುವ ಬಿಜೆಪಿಯನ್ನು ಮನೆಗೆ ಕಳುಹಿಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ಪ್ರತಿಪಾದಿಸಿದರು.

ಕೇಂದ್ರ ಸರಕಾರದ ಕೆಟ್ಟ ಆರ್ಥಿಕ ನೀತಿಯಿಂದಾಗಿ ಸುಮಾರು 90 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದು ಕೊಂಡಿದ್ದಾರೆ. ಬಿ.ಎಸ್.ಎನ್.ಎಲ್. ಮುಚ್ಚುವ ಹಂತದಲ್ಲಿದೆ. ದೇಶದ ಬಹು ದೊಡ್ಡ ರೈಲ್ವೆ ಮತ್ತು ಭಾರತ್ ಪೆಟ್ರೋಲಿಯಂ ಕಂಪನಿಗಳನ್ನು ಖಾಸಗಿಕರಣಗೊಳಿಸಲು ಯೋಜನೆಗಳು ನಡೆಯುತ್ತಿವೆ. ದೇಶದ ದೊಡ್ಡ ಬಂಡವಾಳಶಾಹಿ, ಶ್ರೀಮಂತ ಉದ್ಯಮಿಗಳಿಗೆ ಸರಕಾರದ ಆಸ್ತಿಯನ್ನು ಮಾರಾಟ ಮಾಡುವಂತಹ ದೂರ್ತ ಕೆಲಸವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ. ಹೀಗಾಗಿ ಭವಿಷ್ಯದ ಹಿತದೃಷ್ಟಿಯಿಂದ ಬಿಜೆಪಿ ಯನ್ನು ಅಧಿಕಾರದಿಂದ ದೂರವಿಡಬೇಕೆಂದು ಅವರು ತಿಳಿಸಿದರು.

ಈ ಉಪಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವು ಚಿಕ್ಕಬಳ್ಳಾಪುರ ಮತ್ತು ಹುಣಸೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದು, ಉಳಿದ ಕ್ಷೇತ್ರಗಳಲ್ಲಿ ತಟಸ್ಥ ವಾಗಿರಲಿದೆ ಎಂದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಎಚ್.ಸಿ.ಸತೀಶ್, ಮಳವಳ್ಳಿ ತಾಲೋಕು ಉಪಾಧ್ಯಕ್ಷ ಚಲುವರಾಜು, ಮುಖಂಡರಾದ ಕೆ.ಜಿ. ಸಿದ್ದಲಿಂಗಮೂರ್ತಿ, ಡಿ.ಎನ್. ಮುನಿರಾಜು, ಬಿ.ಎಸ್.ತಮ್ಮಯ್ಯ, ಎಸ್.ಎ.ರಾಜು, ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News