ಮೈಸೂರು: ಜೆಎನ್‍ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

Update: 2019-11-22 18:07 GMT

ಮೈಸೂರು,ನ.22: ದೆಹಲಿಯ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಮೈಸೂರಿನಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ರಾಮಸ್ವಾಮಿ ವೃತ್ತದಲ್ಲಿ ಶುಕ್ರವಾರ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಶುಲ್ಕ ಏರಿಕೆಯಂಬುದು ಜೆಎನ್‍ಯುನಲ್ಲಿನ ಒಂದು ಪ್ರತ್ಯೇಕವಾದ ಘಟನೆಯೇನಲ್ಲ, ಬದಲಾಗಿ ಶಿಕ್ಷಣದ ವ್ಯಾಪಾರೀಕರಣ ಹಾಗೂ ಖಾಸಗೀಕರಣಕ್ಕೆ ನೇರವಾಗಿ ಸಂಬಂಧಿಸಿದೆ. ದೇಶಾದ್ಯಂತ ಇಂತಹ ಶುಲ್ಕ ಏರಿಕೆಯ ನಿದರ್ಶನಗಳನ್ನು ನಾವು ಕಾಣಬಹುದು. 

ವಿವಿಧ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶಿಕ್ಷಣದ ವ್ಯಾಪಾರೀಕರಣದ ಮೂಲಕ ಶಿಕ್ಷಣ ಕ್ಷೇತ್ರವನ್ನು ಒಂದು ಲಾಭದಾಯಕ ವ್ಯಾಪಾರವನ್ನಾಗಿ ಮಾರ್ಪಾಡು ಮಾಡುತ್ತಿವೆ. ಇದರಿಂದ ಶಿಕ್ಷಣ ಬೃಹತ್ ಸಂಖ್ಯೆಯ ಕೆಳವರ್ಗದ ಜನರಿಂದ ದೂರವಾಗುತ್ತಿದೆ. ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜೆಎನ್‍ಯುನಲ್ಲಿ ಕೂಡ ದೊಡ್ಡ ಪ್ರಮಾಣದಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಜನಪರವಾದ, ಹೋರಾಟ ಪರವಾದ ಧೋರಣೆ ಬೆಳೆಸಿಕೊಳ್ಳುತ್ತಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಮೇಲ್ವರ್ಗದ, ವ್ಯವಸ್ಥೆಯ ಪರವಾದ ಚಿಂತನೆಯುಳ್ಳ ವಿದ್ಯಾರ್ಥಿಗಳಿಗೆ ಮಾತ್ರ ಇಲ್ಲಿ ಪ್ರವೇಶ ದೊರಕುವಂತೆ ಮಾಡಬೇಕೆಂಬುದೇ ಕೇಂದ್ರ ಸರ್ಕಾರದ ಹುನ್ನಾರ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಎನ್‍ಯು ವಿದ್ಯಾರ್ಥಿಗಳ ಮೇಲಿನ ದಾಳಿಗೆ ಕಾರಣರಾದ ಪ್ರತಿಯೊಬ್ಬರಿಗೂ ಉಗ್ರ ಶಿಕ್ಷೆ ನೀಡಬೇಕು, ಪ್ರಜಾತಾಂತ್ರಿಕ ಹೋರಾಟಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ಕಡೆಗಿನ ತನ್ನ ಅಪ್ರಜಾತಾಂತ್ರಿಕ ಫ್ಯಾಸೀವಾದಿ ನಿಲುವನ್ನು ಬದಲಾಯಿಸಿಕೊಳ್ಳಬೇಕು ಹಾಗೂ ಈ ಕೂಡಲೇ ಜೆಎನ್‍ಯು ಹಾಸ್ಟೆಲ್ ಶುಲ್ಕ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಿಯುಸಿಎಲ್ ಪ್ರೊ.ಲಕ್ಷ್ಮಿನಾರಾಯಣ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ ರತಿರಾವ್, ಸಿಪಿಐನ ಶೇಷಾದ್ರಿ, ಸಿಪಿಎಂನ ಬಸವರಾಜು, ಪ್ರಗರಿಪರ ಚಿಂತಕ ನಾ.ದಿವಾಕರ್, ಗೋಪಾಲಕೃಷ್ಣ, ವಿದ್ಯಾರ್ಥಿ ಸಂಘಟನೆಯ ತನ್ವೀರ್ ಪಾಷ, ಚಂದ್ರಶೇಖರ್ ಮೇಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News