ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ ಹತ್ತು ವರ್ಷ ಕಠಿಣ ಜೈಲು ಶಿಕ್ಷೆ, ದಂಡ

Update: 2019-11-22 18:12 GMT

ಮೈಸೂರು,22: ಬಾಲಕಿಯ ಅತ್ಯಾಚಾರವೆಸಗಿದ್ದ ಆರೋಪದ ಮೇಲೆ ವ್ಯಕ್ತಿಗೆ ನಗರದ ಫೋಕ್ಸೋ ವಿಶೇಷ ನ್ಯಾಯಾಲಯ ಹತ್ತು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.

ಕೆ.ಆರ್.ನಗರದ ತಾಲೂಕಿನ ಮಹದೇವ ಶಿಕ್ಷೆಗೊಳಗಾದ ಆರೋಪಿ. ಎರಡು ವರ್ಷದ ಹಿಂದೆ ಕೆ.ಆರ್.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆಂಬ ಮಾಹಿತಿಯ ಮೇರೆಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಸಂಬಂಧ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಕಾಯ್ದೆ ಮತ್ತು ಭಾರತ ದಂಡ ಸಂಹಿತೆಯ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿ ಹೇಳಿಕೆಯನ್ನು ಪಡೆದಿದ್ದರು. ಎರಡು ಮಕ್ಕಳ ತಂದೆಯಾಗಿದ್ದ ಮಹದೇವ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಬಗ್ಗೆ ಬಾಲಕಿ ವಿಚಾರಣೆ ವೇಳೆ ತಿಳಿಸಿದ್ದಳು. ಈ ಸಂಬಂಧ ಪೊಲೀಸರು ಮಹದೇವನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಎಸ್.ಜಯಶ್ರೀ ಅವರು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಂತ್ರಸ್ತ ಬಾಲಕಿ ಪರವಾಗಿ ವಿಶೇಷ ಅಭಿಯೋಜಕ ಬಿ.ಸಿ.ಶಿವರುದ್ರಸ್ವಾಮಿ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News