'ಮಧ್ಯರಾತ್ರಿ ಎಬ್ಬಿಸಿ ವೀಡಿಯೊ ಮಾಡಿಸುತ್ತಿದ್ದರು': ನಿತ್ಯಾನಂದನ ಆಶ್ರಮದಿಂದ ರಕ್ಷಿಸಲ್ಪಟ್ಟ ಬಾಲಕಿಯ ಆರೋಪ
ಅಹ್ಮದಾಬಾದ್: 'ಸ್ವಘೋಷಿತ ದೇವಮಾನವ ನಿತ್ಯಾನಂದನ ಆಶ್ರಮದಲ್ಲಿ ತನಗೆ ಸಾಕಷ್ಟು ಮಾನಸಿಕ ಕಿರುಕುಳ ನೀಡಲಾಗಿದೆ, ಮಧ್ಯರಾತ್ರಿ ಎಬ್ಬಿಸಿ ವೀಡಿಯೊ ಮಾಡುವಂತೆ ಹೇಳಲಾಗುತ್ತಿತ್ತು' ಎಂದು ಬೆಂಗಳೂರಿನ 15 ವರ್ಷದ ಬಾಲಕಿಯೊಬ್ಬಳು ಆರೋಪಿಸಿದ್ದಾಳೆ. ಈಕೆಯನ್ನು ಮಕ್ಕಳ ಕಲ್ಯಾಣ ಸಮಿತಿ ಸಹಾಯದಿಂದ ಆಶ್ರಮದಿಂದ ಒಂದು ತಿಂಗಳ ಹಿಂದೆ ರಕ್ಷಿಸುವಲ್ಲಿ ಆಕೆಯ ಹೆತ್ತವರು ಯಶಸ್ವಿಯಾಗಿದ್ದರು.
"ನಿತ್ಯಾನಂದನ ಪ್ರಚಾರಾರ್ಥ ಹಲವು ಕೆಲಸಗಳನ್ನು ಮಾಡಬೇಕಿತ್ತು ಹಾಗೂ ಲಕ್ಷಗಟ್ಟಲೆ ರೂಪಾಯಿ ದೇಣಿಗೆ ಸಂಗ್ರಹಿಸಬೇಕಿತ್ತು. ದೇಣಿಗೆಗಳು 3 ಲಕ್ಷ ರೂ. ದಿಂದ ಆರಂಭಗೊಂಡು 8 ಕೋಟಿ ರೂ. ತನಕವಿತ್ತು. ನಾವು ದೇಣಿಗೆ ಅಥವಾ ಎಕರೆಗಟ್ಟಲೆ ಜಮೀನು ಪಡೆಯಬೇಕಿತ್ತು'' ಎಂದು ಬಾಲಕಿ ಹೇಳಿದ್ದಾಳೆ.
"ಮಧ್ಯರಾತ್ರಿ ಅವರು ನಮ್ಮನ್ನು ಎಬ್ಬಿಸಿ ಸ್ವಾಮೀಜಿಗಾಗಿ ವೀಡಿಯೊ ಮಾಡಿಸುತ್ತಿದ್ದರು. ನಾವು ಭಾರೀ ಆಭರಣ ಮತ್ತು ಮೇಕಪ್ ಧರಿಸಬೇಕಿತ್ತು. ನನ್ನ ಹಿರಿಯ ಸೋದರಿಯನ್ನು ಅಲ್ಲಿಂದ ಹೊರತರಲು ಸಾಧ್ಯವಾಗಿಲ್ಲ. ನನ್ನ ಸೋದರಿ ಮಾಡಿದ ಎಲ್ಲಾ ವೀಡಿಯೊಗಳೂ ಸ್ವಾಮಿಯ ಆದೇಶದಂತೆ ಮಾಡಲಾಗಿತ್ತು. ನಮ್ಮ ತಂದೆ ತಾಯಿ ಬಗ್ಗೆ ಕೆಟ್ಟದ್ದಾಗಿ ಮಾತನಾಡುವಂತೆ ಆಕೆಗೆ ಹೇಳಲಾಗಿತ್ತು. ಅವರು ನನಗೂ ಹಾಗೆ ಮಾಡಲು ಹೇಳಿದ್ದರೂ ನಾನು ನಿರಾಕರಿಸಿದೆ''ಎಂದು ಆಕೆ ತಿಳಿಸಿದ್ದಾಳೆ.
ಆಶ್ರಮದ ಆಡಳಿತ ಆಕೆಯನ್ನು ಕೊಠಡಿಯಲ್ಲಿ ಎರಡು ತಿಂಗಳ ಕಾಲ ಕೂಡಿ ಹಾಕಿ ಇದು ಆಧ್ಯಾತ್ಮಿಕ ಪ್ರಕ್ರಿಯೆ ಎಂದು ಹೇಳಿತ್ತು. ಆಶ್ರಮದ ಜನರೂ ಕೆಟ್ಟ ಭಾಷೆ ಬಳಸುತ್ತಿದ್ದರು ಎಂದು ಆಕೆ ಆರೋಪಿಸಿದ್ದಾಳೆ.