ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದೇಕೆ ?

Update: 2019-11-23 13:59 GMT

ಬೆಳಗಾವಿ, ನ. 23: ‘ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಸರಕಾರ ಬೀಳಿಸುವ ಶಕ್ತಿ ಇದೆ. ಆದರೆ, ಅವರಿಗೆ ತನ್ನ ಕ್ಷೇತ್ರದ ಹಳ್ಳಿಗಳಿಗೆ ಕನಿಷ್ಠ ಒಂದು ಬಸ್ ಬಿಡಿಸುವಂತಹ ಶಕ್ತಿಯೇ ಇಲ್ಲ’ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತೀಶ್ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಗೋಕಾಕ್ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ. ಬದಲಿಗೆ ರಮೇಶ್ ಜಾರಕಿಹೊಳಿ ವಿರುದ್ಧ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

ರಮೇಶ್ ಜಾರಕಿಹೊಳಿ ಮತ್ತವರ ಬೆಂಬಲಿಗರು ಒಂದು ರೀತಿಯಲ್ಲಿ ಗಸ್ತು ತಿರುಗುವ ಪೊಲೀಸರಿದ್ದಂತೆ. ಆ ಬೀಟ್ ಪೊಲೀಸರು ಪಿಎಸ್ಸೈಯನ್ನು ಭೇಟಿ ಮಾಡಲು ಬಿಡುವುದಿಲ್ಲ. ಯಾವುದೇ ಪಕ್ಷದ ಶಾಸಕ ಜನರಿಗೆ ಸಿಗಬೇಕು. ಆದರೆ, ರಮೇಶ್ ಇದಕ್ಕೆ ವಿರುದ್ಧ ಎಂದು ವಾಗ್ದಾಳಿ ನಡೆಸಿದರು.

ಗೋಕಾಕ್ ಕ್ಷೇತ್ರದ ಬಹುತೇಕ ಹಳ್ಳಿಗಳಿಗೆ ಬಸ್ ಸಂಪರ್ಕವಿಲ್ಲ. ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲ. ಇವರದ್ದು ಯಾವುದೇ ಸಮಾಜ ಸೇವೆಯೂ ಇಲ್ಲ. ಆದರೂ ಅವರು ಯಾವಾಗಲು ಬ್ಯುಸಿಯಾಗಿದ್ದಾರೆಂದು ಟೀಕಿಸಿದರು.

ಹಿಂದಿನ ಚುನಾವಣೆಯಲ್ಲಿ ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದ ರಮೇಶ್, ಇದೀಗ ಅಭಿವೃದ್ಧಿಗಾಗಿ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು ಹೇಳುತ್ತಾರೆ. ಅಂದರೆ ಇವರಿಗೆ ‘ಅಭಿವೃದ್ಧಿ’ ಎಂದರೆ ಏನು ಎಂಬುದು ಗೊತ್ತೇ ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.

ರಮೇಶ್ ತನ್ನ ಮನೆ ಮುಂದಿನ ರಸ್ತೆ ಮಾಡಲು ಐದು ವರ್ಷ ಬೇಕಾಯಿತು. ಇನ್ನೂ ಅವರ ಮನೆಯ ಮುಂದಿನ ರಸ್ತೆ ಕಾಮಗಾರಿಯೇ ಮುಗಿದಿಲ್ಲ. ಯಡಿಯೂರಪ್ಪ ಬಿಟ್ಟರೆ ರಮೇಶ್ ಜಾರಕಿಹೊಳಿಗೆ ಬೇರೆ ಆಯ್ಕೆ ಇಲ್ಲ. ಹೀಗಾಗಿ ಇದೀಗ ಅವರ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆಂದು ಲೇವಡಿ ಮಾಡಿದರು.

ಡಿ.5ರ ಸಂಜೆ ಪಟಾಕಿ ಸಿಡಿತ: ಲಖನ್ ಜಾರಕಿಹೊಳಿ ನಮ್ಮ ಶಕ್ತಿ. ಮಾತ್ರವಲ್ಲ ಅವರೇ ನಮ್ಮ ಪಕ್ಷದ ಶಕ್ತಿ. ಡಿ.9ರ ಫಲಿತಾಂಶವರೆಗೆ ನಾವು ಕಾಯುವುದಿಲ್ಲ. ಡಿ.5ರ ಚುನಾವಣೆ ಬಳಿಕ ಅಂದು ಸಂಜೆಯೇ ನಾವು ಪಟಾಕಿ ಸಿಡಿಸಿ ನಮ್ಮ ಅಭ್ಯರ್ಥಿ ಗೆಲುವಿಗೆ ಸಂಭ್ರಮಿಸಲಿದ್ದೇವೆ. ಸರಕಾರ ಬೀಳಿಸಿದವರನ್ನು ನಾವು ಕೆಡವಬೇಕಿದೆ ಎಂದು ಆಕ್ರೋಶ ಹೊರಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News