ಆನಂದ್‌ ಸಿಂಗ್ ಪುತ್ರನ ವಿವಾಹಕ್ಕೆ ಅವಕಾಶ ನೀಡಬೇಡಿ ಎಂದ ವಿ.ಎಸ್.ಉಗ್ರಪ್ಪ: ಕಾರಣವೇನು ಗೊತ್ತೇ ?

Update: 2019-11-23 14:12 GMT

ಬಳ್ಳಾರಿ, ನ. 23: ವಿಜಯನಗರ (ಹೊಸಪೇಟೆ) ಕ್ಷೇತ್ರದ ಉಪಚುನಾವಣೆಯ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಡಿ.1ರಂದು ಹೊಸಪೇಟೆಯಲ್ಲಿ ನಡೆಸಲಿರುವ ಅವರ ಪುತ್ರನ ವಿವಾಹಕ್ಕೆ ಅವಕಾಶ ನೀಡಬಾರದು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ಶನಿವಾರ ಹೊಸಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತದಾರರಿಗೆ ಔತಣ ನೀಡುವುದು, ಯಾವುದೇ ರೀತಿಯ ಉಡುಗೊರೆ ಕೊಡುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಆದುದರಿಂದ ಆಯೋಗ ಮದುವೆಗೆ ಅವಕಾಶ ನೀಡಬಾರದೆಂದು ಆಯೋಗಕ್ಕೆ ದೂರು ನೀಡಲಾಗುವುದು ಎಂದರು.

ವಿಜಯನಗರ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಅನರ್ಹ ಶಾಸಕ ಆನಂದ್ ಸಿಂಗ್ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡಿಲ್ಲ. ಬದಲಿಗೆ ಅವರ ಕೊಡುಗೆ ಏನೆಂದರೆ ಹೊಸಪೇಟೆಯಲ್ಲಿ ದೊಡ್ಡ ಬಂಗ್ಲೆ ನಿರ್ಮಿಸಿ, ಗೃಹ ಪ್ರವೇಶ ಮಾಡಿರುವುದು ಎಂದು ಉಗ್ರಪ್ಪ ಟೀಕಿಸಿದರು.

ಆನಂದ್‌ಸಿಂಗ್ ಅವರು ಡಿ.1ರಂದು ಪುತ್ರ ಸಿದ್ದಾರ್ಥ ಸಿಂಗ್ ಹಾಗೂ ಸಂಜನಾ ಸಬರದ ಅವರ ಮದುವೆ ನಿಗದಿಯಾಗಿದೆ. ವಿವಾಹ ಸಮಾರಂಭಕ್ಕೆ ಸಾವಿರಾರು ಜನರಿಗೆ ಆಮಂತ್ರಣ ನೀಡಲಾಗಿದ್ದು, ಮತದಾರರಿಗೆ ಆಮಿಷವೊಡ್ಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಆಯೋಗದ ನಿಗಾ: ವಿವಾಹಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಊಟೋಪಚಾರಕ್ಕೂ ಯಾವುದೇ ಸಮಸ್ಯೆಯಿಲ್ಲ. ಆದರೆ, ಯಾರಿಗೂ ಉಡುಗೊರೆ ನೀಡಬಾರದು. ಮದುವೆಯ ದಿನ ಚುನಾವಣಾ ಆಯೋಗ ನಿಗಾ ವಹಿಸಲಿದ್ದು, ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಸ್ಪಷ್ಟಣೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News