ಬಳ್ಳಾರಿ ವಿಭಜನೆಗೆ ಬಿಡುವುದಿಲ್ಲ: ಶಾಸಕ ಸೋಮಶೇಖರ್ ರೆಡ್ಡಿ
ಬಳ್ಳಾರಿ, ನ.23: ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ಜಿಲ್ಲೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಶಾಸಕ ಜಿ. ಸೋಮಶೇಖರ್‌ರೆಡ್ಡಿ ಇಂದಿಲ್ಲಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಆನಂದ್ ಸಿಂಗ್ ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಕಾರಣ ಅವರ ಪರ ಪ್ರಚಾರಕ್ಕೆ ಬಂದಿರುವೆ ಎಂದು ತಿಳಿಸಿದರು.
ವಿಜಯನಗರ ಜಿಲ್ಲೆಯ ವಿಚಾರದಲ್ಲಿ ನನ್ನ ನಿಲುವು ಈ ಹಿಂದಿನಂತೆ ಈಗಲೂ ಸ್ಪಷ್ಟವಾಗಿದೆ. ಹಿಂದೆಯೂ ವಿರೋಧಿಸಿದ್ದೆ. ಮುಂದೆಯೂ ವಿರೋಧಿಸುವೆ. ಅದು ನಿರಂತರ. ಯಾರು, ಏನೇ ಮಾಡಿದರೂ ಹೊಸ ಜಿಲ್ಲೆ ರಚನೆ ಆಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಆನಂದ್ ಸಿಂಗ್ ವಿಜಯನಗರ ಜಿಲ್ಲೆ ರಚನೆ ಪರ ವಕಾಲತ್ತು ಮಾಡುತ್ತಿದ್ದರೆ, ರೆಡ್ಡಿ ಅದನ್ನು ವಿರೋಧಿಸುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕೆ ರೆಡ್ಡಿಯವರು ಬರುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಕ್ಷೇತ್ರಕ್ಕೆ ಬಂದು ಪ್ರಚಾರ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.