×
Ad

ರಾಷ್ಟ್ರಪತಿ ಬಿಜೆಪಿಯ ರಬ್ಬರ್ ಸ್ಟಾಂಪ್‌: ದಿನೇಶ್ ಗುಂಡೂರಾವ್

Update: 2019-11-23 20:06 IST

ಬೆಂಗಳೂರು, ನ.23: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ಸರಕಾರ ರಚನೆ ಮಾಡಲು ರಾತ್ರೋರಾತ್ರಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಅವಕಾಶ ಕಲ್ಪಿಸಿ ಕೊಟ್ಟಿರುವುದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದೆ. ಅಲ್ಲದೇ, ಮಹಾರಾಷ್ಟ್ರದ ಪಾಲಿಗೆ ಇವತ್ತು ಕರಾಳ ದಿನವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಇವತ್ತು ಪ್ರಜಾಪ್ರಭುತ್ವ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಎಲ್ಲ ಸಂಸ್ಥೆಗಳ ಮೇಲಿನ ನಂಬಿಕೆ ಕಳೆದುಕೊಳ್ಳುವಂತಹ ಪರಿಸ್ಥಿತಿ ಉದ್ಭವವಾಗಿದೆ ಎಂದರು.

ಮಹಾರಾಷ್ಟ್ರದ ರಾಜ್ಯಪಾಲರು ರಾಷ್ಟ್ರಪತಿ ಆಡಳಿತ ಹಿಂಪಡೆಯುವ ಸಂಬಂಧ ರಾತ್ರೋರಾತ್ರಿ ಕೇಂದ್ರ ಸರಕಾರಕ್ಕೆ ಯಾವ ರೀತಿ ವರದಿ ಒಪ್ಪಿಸಿದ್ದಾರೋ ಗೊತ್ತಿಲ್ಲ. ಸ್ಥಿರ ಸರಕಾರ ರಚನೆ ಮಾಡಲು ಏನು ಆಧಾರಗಳಿತ್ತು ಅನ್ನೋದು ಗೊತ್ತಿಲ್ಲ. ಬೆಳಗಿನ ಜಾವ 5.45ಕ್ಕೆ ರಾಷ್ಟ್ರಪತಿಗಳು ಕೇಂದ್ರದ ಶಿಫಾರಸ್ಸಿಗೆ ಸಹಿ ಹಾಕಿರುವುದು ನೋಡಿದರೆ, ಅವರು ಬಿಜೆಪಿ ರಬ್ಬರ್ ಸ್ಟಾಂಪ್‌ನಂತೆ ವರ್ತಿಸಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದರು.

ಸರಕಾರ ರಚನೆ ಸಂಬಂಧ ನಿನ್ನೆ ರಾತ್ರಿಯವರೆಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬೆಳಗ್ಗೆ 8 ಗಂಟೆಗೆ ರಾಜ್ಯಪಾಲರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದ್ದಾರೆ. ಪೂರ್ಣ ಪ್ರಮಾಣದ ಬಹುಮತ ಇದೆಯೋ ಇಲ್ಲವೋ ಎಂಬುದರ ಕುರಿತು ವಿಚಾರಣೆ ನಡೆಸಲು ಹೋದಂತಿಲ್ಲ ಎಂದು ಅವರು ಟೀಕಿಸಿದರು.

ಎನ್‌ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆ ಸರಕಾರ ರಚನೆ ಕುರಿತು ಮಾತುಕತೆ ಅಂತಿಮ ಹಂತದಲ್ಲಿದ್ದಾಗ ರಾಜ್ಯಪಾಲರು ಸ್ವಂತ ವಿವೇಚನೆಯನ್ನು ಬಳಸದೆ, ಸಂವಿಧಾನದ ರೀತಿಯಲ್ಲೂ ಕೆಲಸ ಮಾಡದೆ, ಓರ್ವ ಬಿಜೆಪಿಯ ಏಜೆಂಟ್ ರೀತಿ ಕೆಲಸ ಮಾಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಕಿಡಿಗಾರಿದರು.

ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಒಂದು ವಾರ ಸಮಯ ನೀಡುವ ಮೂಲಕ, ಶಾಸಕರ ಕುದುರೆ ವ್ಯಾಪಾರ ಮಾಡಲು, ಪಕ್ಷಗಳನ್ನು ಒಡೆಯಲು ಸದಾವಕಾಶ ಕಲ್ಪಿಸಿಕೊಟ್ಟಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಅನೈತಿಕತೆಯ ನಗ್ನ ನರ್ತನ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯು ಪೆಡಂಭೂತದಂತೆ ಆವರಿಸಿಕೊಂಡು, ಎಲ್ಲವನ್ನೂ ನುಂಗಿ ಹಾಕುತ್ತಿದೆ. ರಾತ್ರೋರಾತ್ರಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಮೂಲಕ ಬಿಜೆಪಿಯು ಯಾವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಒಂದು ರೀತಿಯಲ್ಲಿ ಇದನ್ನು ತಮ್ಮ ಸಾಧನೆ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು.

ನಮ್ಮ ರಾಜ್ಯದಲ್ಲಿ ಯಾವ ರೀತಿ ನಮ್ಮ ಶಾಸಕರನ್ನು ಖರೀದಿಸಿ, ಅವರನ್ನು ಕರೆದುಕೊಂಡು ಹೋಗಿ ಪೋಷಣೆ ಮಾಡಿದರೋ, ಮೈತ್ರಿ ಸರಕಾರ ಬೀಳಿಸಲು ಸಚಿವ ಸ್ಥಾನ, ಹಣದ ಆಮಿಷವೊಡ್ಡಿದ್ದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಜನತೆ ಎಚ್ಚೆತ್ತುಕೊಳ್ಳದೆ ಇದ್ದರೆ, ಬಿಜೆಪಿಯವರು ನಾಳೆ ಯಾರನ್ನು ಬಿಡುವುದಿಲ್ಲ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News