'ನನ್ನ ವೀರಶೈವ ಲಿಂಗಾಯತ ಸಮುದಾಯದ....': ಜಾತಿ ಅಸ್ತ್ರ ಬಳಸಿ ಮತ ಬೇಟೆಗೆ ಇಳಿದ ಬಿಎಸ್‌ವೈ

Update: 2019-11-23 14:50 GMT

ಬೆಳಗಾವಿ, ನ. 23: ಉಪಚುನಾವಣೆ ಪ್ರಚಾರದ ಅಖಾಡಕ್ಕಿಳಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಜಾತಿಯ ಅಸ್ತ್ರ ಪ್ರಯೋಗಿಸಿದ್ದು, ‘ನನ್ನ ವೀರಶೈವ ಲಿಂಗಾಯತ ಸಮುದಾಯದ ಒಂದೂ ಮತ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಹೋಗಬಾರದು’ ಎಂದು ಮನವಿ ಮಾಡಿದ್ದಾರೆ.

ಶನಿವಾರ ಜಿಲ್ಲೆಯ ಅಥಣಿ, ಕಾಗವಾಡ ಹಾಗೂ ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಗೋಕಾಕ್‌ನಲ್ಲಿ ಏರ್ಪಡಿಸಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಲಿಂಗಾಯತ ಸಮುದಾಯದ ಮತದಾರರು ಯಾವುದೇ ವ್ಯಾಮೋಹಕ್ಕೆ ಬಲಿಯಾಗದೆ, ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕು ಎಂದು ಕೋರಿದರು.

ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ ಅವರು ಸೇರಿದಂತೆ 17 ಮಂದಿ ಅನರ್ಹರನ್ನು ಕಟ್ಟಿಕೊಂಡು ಹೋರಾಟ ಮಾಡದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ ಸೇರಿದಂತೆ ನಾವ್ಯಾರು ವಿಧಾನಸೌಧದ ಮೂರನೆ ಮಹಡಿಯಲ್ಲಿ ಕೂರಲು ಸಾಧ್ಯವಿರಲಿಲ್ಲ. ಹೀಗಾಗಿ ನಾವು ಇದನ್ನು ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲ. ಅವರನ್ನು ಗೆಲ್ಲಿಸುವ ಮೂಲಕ ಋಣ ತೀರಿಸಬೇಕಾಗಿದೆ ಎಂದ ಅವರು, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಸೇರಿ ಬಿಜೆಪಿಯ ಹದಿನೈದು ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ನಾನು ಅಧಿಕಾರಕ್ಕೆ ಬಂದ ನೂರ ಇಪ್ಪತ್ತು ದಿನಗಳಿಂದ ಹಿಂದೂ-ಮುಸ್ಲಿಮರೆಂಬ ಯಾವುದೇ ಭೇದವಿಲ್ಲದೆ, ಎಲ್ಲರನ್ನೂ ಒಂದೇ ತಾಯಿ ಮಕ್ಕಳಂತೆ ಕಾಣುತ್ತಿದ್ದೇನೆ. ನಾನು ಯಾವುದೇ ಸಮಾಜದ ವಿರೋಧಿಯಲ್ಲ. ನಾನು ಸಿಎಂ ಆಗಲು ಎಲ್ಲ ಸಮಾಜದವರು ಸಹಕರಿಸಿದ್ದಾರೆ ಎಂದು ಬಿಎಸ್‌ವೈ ಹೇಳಿದರು.

ಇದೇ ವೇಳೇ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಅಥಣಿ ಮತ್ತು ಕಾಗವಾಡ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ. ಹೀಗಾಗಿ ನೀವು ನೀಡುವ ಮತ ನನಗೆ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಿದಂತೆ. ಹೀಗಾಗಿ ಮಹೇಶ್ ಕುಮಠಳ್ಳಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News