ಹೊಡೆಯಬೇಕೆಂದಿದ್ದರೆ ಮನೆಗೆ ಬನ್ನಿ, ಪಬ್ಲಿಕ್‍ ನಲ್ಲಿ ಬೇಡ: ಅನರ್ಹ ಶಾಸಕ ನಾರಾಯಣಗೌಡ

Update: 2019-11-23 15:30 GMT

ಮಂಡ್ಯ, ನ.23: ರಾಜ್ಯವನ್ನು ದೇಶದಲ್ಲೇ ಮಾದರಿ ಮಾಡಲು ಪಣ ತೊಟ್ಟಿರುವ ಬಸವಣ್ಣನ ಅನುಯಾಯಿ ಯಡಿಯೂರಪ್ಪ ಅವರನ್ನು ಕೊಟ್ಟ ಭೂಮಿ ಕೆ.ಆರ್.ಪೇಟೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಉಪಚುನಾವಣೆ ಸಂಬಂಧ ಶನಿವಾರ ನಡೆದ ಬಿಜೆಪಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಹಾಗೂ ನಿಮ್ಮ ಪುಣ್ಯ ಭೂಮಿಯ ಸ್ವಾಭಿಮಾನದ ಉಳಿವಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಜನತೆಯಲ್ಲಿ ಮನವಿ ಮಾಡಿದರು.

ಕೇಳಿದ್ದನ್ನು ಕೊಡುವ ಕಾಮಧೇನು ಯಡಿಯೂರಪ್ಪ. ಭಾಗ್ಯಲಕ್ಷ್ಮೀ ಯೋಜನೆ, ವಿದ್ಯಾರ್ಥಿನಿಯರಿಗೆ ಸೈಕಲ್, ವೃದ್ಧರಿಗೆ, ವಿಧವೆಯರಿಗೆ ಮಾಸಾಶನ ಕೊಟ್ಟಿದ್ದು ಯಡಿಯೂರಪ್ಪ. ನಾರಾಯಣಗೌಡರನ್ನು ಗೆಲ್ಲಿಸಿದರೆ ಕೆ.ಆರ್.ಪೇಟೆ ಕ್ಷೇತ್ರ ಅಭಿಯಾಗುತ್ತದೆ ಎಂದು ಅವರು ಹೇಳಿದರು.

ನಾಡಿನ ಸ್ವಾಭಿಮಾನಕ್ಕಾಗಿ ನಾರಾಯಣಗೌಡರು ಅಧಿಕಾರ ತ್ಯಾಗ ಮಾಡಿದ್ದಾರೆ. ಹಣ, ಅಧಿಕಾರಕ್ಕಾಗಿ ರಾಜೀನಾಮೆ ಕೊಟ್ಟಿಲ್ಲ. ಕೆ.ಆರ್.ಪೇಟೆಯನ್ನು ರಾಮರಾಜ್ಯ ಮಾಡಲು ರಾಜೀನಾಮೆ ಕೊಟ್ಟಿದ್ದಾರೆ. ನಾರಾಯಣಗೌಡ ಗೆಲ್ಲುವ ವಿಶ್ವಾಸವಿದೆ ಎಂದು ಎಂದು ಅವರು ಹೇಳಿದರು.

ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಮಾತನಾಡಿ, ಈ ಮಣ್ಣಿನ ಮಗ ಯಡಿಯೂರಪ್ಪ ಸಿಎಂ ಆಗಿದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಬಿಜೆಪಿಗೆ ಹೋಗಿದ್ದೇನೆ ಎಂದರು. ಕ್ಷೇತ್ರದ ಅಭಿವೃದ್ಧಿಗೆ ಸಾವಿರ ಕೋಟಿ ರೂ. ಕೊಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ದಯವಿಟ್ಟು ಗೆಲ್ಲಿಸಿ. ಅವರ ಕೈಕಾಲು ಹಿಡಿದು ಮಾದರಿ ತಾಲೂಕು ಮಾಡುತ್ತೇನೆ ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.

ಎಕ್ಕಡದಲ್ಲಿ ಹೊಡೆಸುವಂತಹ ಕೆಲಸಕ್ಕೆ ಕೈ ಹಾಕಿದ್ದಾರೆ. ನನಗೆ ಹೊಡೆಯಬೇಕು ಅಂದ್ರೆ ಹೊಡೆಯಿರಿ. ದಯವಿಟ್ಟು ಪಬ್ಲಿಕ್‍ನಲ್ಲಿ ಹೊಡೆಯಬೇಡಿ. ಪಬ್ಲಿಕ್‍ನಲ್ಲಿ ಹೊಡೆದರೆ ಜನರಿಗೆ ತೊಂದರೆಯಾಗುತ್ತೆ. ಮನೆಗೆ ಬಂದು ಬೇಕಿದ್ದರೆ ಹೊಡೆಯಿರಿ ಎಂದು ಅವರು ದೇವೇಗೌಡರ ಕುಟುಂಬದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News