ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣದ ನ್ಯಾಯಾಂಗ ತನಿಖೆಗೆ ಪಿಎಫ್‌ಐ ಆಗ್ರಹ

Update: 2019-11-23 16:30 GMT

ಬೆಂಗಳೂರು, ನ.23: ಮೈಸೂರಿನ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ನಡೆದ ಹಲ್ಲೆ ಪ್ರಕರಣದ ವಿಚಾರಣೆ ಮತ್ತು ಪೊಲೀಸರ ತನಿಖಾ ಕ್ರಮವು ಸಂಶಯಾಸ್ಪದವಾಗಿದ್ದು, ಪ್ರಕರಣವನ್ನು ಸಂಪೂರ್ಣವಾಗಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷ ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶಾಸಕರ ಮೇಲೆ ಹಲ್ಲೆ ನಡೆದ ದಿನದಿಂದ ಹಲವು ಊಹಾಪೋಹಗಳನ್ನು ಸೃಷ್ಟಿಸಲಾಗಿದ್ದರೂ ಪೊಲೀಸರ ಆರಂಭಿಕ ತನಿಖಾ ಹಂತದಲ್ಲಿ ಇದೊಂದು ವೈಯಕ್ತಿಕ ದ್ವೇಷದ ಹಲ್ಲೆ ಪ್ರಕರಣ ಎಂಬುದಾಗಿ ವರದಿಯಾಗಿತ್ತು ಎಂದು ಅವರು ತಿಳಿಸಿದ್ದಾರೆ. ಆದರೆ, ಬಿಜೆಪಿಯು ಈ ಪ್ರಕರಣವನ್ನು ರಾಜಕೀಯ ದ್ವೇಷಕ್ಕಾಗಿ ಬಳಸಿಕೊಂಡಿದ್ದು, ಬಿಜೆಪಿ ಮುಖಂಡರು ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಯ ಮೇಲೆ ಆರೋಪ ಹೊರಿಸಿ ಹೇಳಿಕೆ ನೀಡತೊಡಗಿದ್ದರು. ಬಿಜೆಪಿ ಸರಕಾರವು ಈ ಪ್ರಕರಣವನ್ನು ಸಂಪೂರ್ಣವಾಗಿ ರಾಜಕೀಯಗೊಳಿಸಿದ್ದು, ಪೊಲೀಸ್ ತನಿಖೆಯ ದಿಕ್ಕನ್ನೆ ತಪ್ಪಿಸಿದೆ ಎಂದು ಅವರು ದೂರಿದ್ದಾರೆ.

ಬಿಜೆಪಿ ಆಡಳಿತದಡಿ ಪೊಲೀಸ್ ಇಲಾಖೆಯು ನಡೆಸುವ ತನಿಖೆಯ ನಿಷ್ಪಕ್ಷಪಾತವಾಗಿರುವುದಿಲ್ಲ ಎಂಬುದಕ್ಕೆ ದೇಶಾದ್ಯಂತ ಹಲವು ಪ್ರಕರಣಗಳು ಸಾಕ್ಷಿಯಾಗಿವೆ. ಆದುದರಿಂದ, ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿದರೆ ಮಾತ್ರವೇ ಘಟನೆಯ ಸತ್ಯಾಂಶ ಹೊರಬೀಳಲಿದೆ ಎಂದು ನಾಸಿರ್ ಪಾಷ ತಿಳಿಸಿದ್ದಾರೆ.

ಹಲ್ಲೆ ಪ್ರಕರಣ ನ್ಯಾಯಾಂಗ ತನಿಖೆಗಾಗಿ ಆಗ್ರಹಿಸುವುದು. ಜೊತೆಗೆ ರಾಜಕೀಯ ದ್ವೇಷಕ್ಕಾಗಿ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸುತ್ತಿರುವ ಬಗ್ಗೆಯೂ ತನಿಖೆ ನಡೆಯಬೇಕು. ರಾಜಕೀಯ ದ್ವೇಷಕ್ಕಾಗಿ ನಡೆಯುವ ಇಂತಹ ಪ್ರಭುತ್ವ ದೌರ್ಜನ್ಯದ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಯನ್ನು ಸಂಘಟಿಸಿ ನ್ಯಾಯಕ್ಕಾಗಿ ತನ್ನ ಹೋರಾಟ ಮುಂದುವರಿಸಲಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News