×
Ad

ಎಲ್ಲಾ ವಾಹನಗಳಿಗೆ ಡಿ.1ರಿಂದ ‘ಫಾಸ್ಟ್ ಟ್ಯಾಗ್’ ಕಡ್ಡಾಯ; ಇಲ್ಲದಿದ್ದರೆ ದಂಡ

Update: 2019-11-23 22:28 IST

ಬೆಂಗಳೂರು, ನ.23: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಫಾಸ್ಟ್ ಟ್ಯಾಗ್‌‘ನ್ನು ಜಾರಿಗೆ ತರುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೆ(ಹಳೆಯ ಮತ್ತು ಹೊಸ) ಡಿ.1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ್ದು, ಒಂದು ವೇಳೆ ಫಾಸ್ಟ್ ಟ್ಯಾಗ್ ಇಲ್ಲದೇ ಇದ್ದರೆ ದ್ವಿಗುಣ ದಂಡ ವಿಧಿಸಲು ತೀರ್ಮಾನಿಸಿದೆ.

ಡಿ.1ರಿಂದ ಟೋಲ್ ಪಾವತಿಗಳು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹದಡಿ ಫಾಸ್ಟ್ ಟ್ಯಾಗ್ ಮೂಲಕವೇ ನಡೆಯುತ್ತದೆ. ಎಲ್ಲ ಟೋಲ್ ಪ್ಲಾಜಾಗಳಲ್ಲಿ ಒಂದು ಪ್ರವೇಶ ದ್ವಾರವನ್ನು ಹೈಬ್ರಿಡ್ ಆಗಿ ಬಳಸಲಾಗುತ್ತದೆ. ಇದರಲ್ಲಿ ಫಾಸ್ಟ್ ಟ್ಯಾಗ್ ಹಾಗೂ ಇತರೆ ವಿಧಾನದಲ್ಲೂ ಟೋಲ್ ಸ್ವೀಕರಿಸಲಾಗುತ್ತದೆ. ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಡಿ.1ರಿಂದ ಶೇ.100ರಷ್ಟು ಜಾರಿಯಾಗಲಿದೆ ಎಂದು ಎನ್‌ಎಚ್‌ಎಐ ತಿಳಿಸಿದೆ.

ಏನಿದು ಫಾಸ್ಟ್ ಟ್ಯಾಗ್?: ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆ ತಡೆಗಟ್ಟಲು ಕೇಂದ್ರ ಸರಕಾರ ಫಾಸ್ಟ್ ಟ್ಯಾಗ್ ಸೌಲಭ್ಯವನ್ನು ಜಾರಿಗೆ ತಂದಿದೆ. ಫಾಸ್ಟ್ ಟ್ಯಾಗ್ ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯವಾಗಿದ್ದು, ಟೋಲ್ ಶುಲ್ಕವನ್ನು ನಗದು ರಹಿತವಾಗಿ ಪಾವತಿಸಬಹುದಾಗಿದೆ.

ಶುಲ್ಕ ಪಾವತಿ ಹೇಗೆ?: ರೇಡಿಯೋ-ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್(ಆರ್‌ಎಫ್‌ಐಡಿ) ಆಧಾರಿತ ಫಾಸ್ಟ್ ಟ್ಯಾಗನ್ನು ವಾಹನದ ಮುಂಭಾಗದ ಗ್ಲಾಸ್‌ಗೆ ಅಂಟಿಸಲಾಗಿರುತ್ತದೆ. ಈ ಟ್ಯಾಗ್ ರೇಡಿಯೋ ಫ್ರಿಕ್ವೆನ್ಸಿ ಮೂಲಕ ಸ್ಕಾನ್ ಆಗಲಿದ್ದು, ನಂತರ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಯಿಂದ ಹಣ ಕಡಿತವಾಗಲಿದೆ. ಆದರೆ ಬ್ಯಾಂಕ್ ಖಾತೆಯಲ್ಲಿ ಮುಂಗಡ ಹಣವನ್ನು ಇಟ್ಟಿರಬೇಕಾಗುತ್ತದೆ.

ಎಲ್ಲ ಪ್ರಮುಖ ಬ್ಯಾಂಕುಗಳು ಫಾಸ್ಟ್ ಟ್ಯಾಗ್ ಸೌಲಭ್ಯ ನೀಡುತ್ತಿದ್ದು, ಇದನ್ನು ಗ್ರಾಹಕರ ಉಳಿತಾಯ ಖಾತೆಗೆ ಲಿಂಕ್ ಮಾಡಲಾಗುತ್ತದೆ. ನೋಂದಾಯಿತ ವಾಹನ ಟೋಲ್ ಪ್ಲಾಜಾ ಮೂಲಕ ಹಾದು ಹೋಗುತ್ತಿದ್ದಂತೆ ಅಲ್ಲಿನ ರೀಡರ್, ಟ್ಯಾಗನ್ನು ರೀಡ್ ಮಾಡುತ್ತದೆ. ಆಗ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಆದರೆ, ಖಾತೆಯಲ್ಲಿ ಮೊದಲೇ ಹಣ ಜಮೆಯಾಗಿರಬೇಕು. ಫಾಸ್ಟ್ ಟ್ಯಾಗನ್ನು ವಾಹನದ ನೋಂದಣಿ ಸಂಖ್ಯೆಗೆ ಜೋಡಿಸಲಾಗಿರುತ್ತದೆ.

ಪ್ರಮುಖ ಬ್ಯಾಂಕುಗಳಾದ ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕುಗಳು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್(ಎಇಟಿಸಿ)ನ ಭಾಗವಾಗಿವೆ. ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎಎಎಐ) ಹಾಗೂ ಇಂಡಿಯನ್ ಹೈವೇಸ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್(ಐಎಚ್‌ಎಂಸಿಎಲ್)ದ ಮಾರ್ಗಸೂಚಿಗಳ ಅಡಿಯಲ್ಲಿ ಬರುತ್ತದೆ.

ಫಾಸ್ಟ್ ಟ್ಯಾಗ್ ವಿವಿಧ ಬ್ಯಾಂಕ್‌ಗಳು ಮತ್ತು ಐಎಚ್‌ಎಂಪಿಎಲ್, ಎನ್‌ಎಚ್‌ಐಎ ಸ್ಥಾಪಿಸಿದ 28,500 ಮಾರಾಟ ಕೇಂದ್ರಗಳು, ಆಯ್ದ ಪೆಟ್ರೋಲ್ ಪಂಪ್, ಎಲ್ಲ ಸುಂಕ ವಸೂಲಾತಿ ಕೇಂದ್ರಗಳಲ್ಲಿ ಸೇರಿದಂತೆ ನೆಟ್ ಬ್ಯಾಂಕಿಂಗ್ ಮೂಲಕವೂ ಗ್ರಾಹಕರು ಫಾಸ್ಟ್ ಟ್ಯಾಗಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಮಾತ್ರವಲ್ಲದೆ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಖರೀದಿಸಬಹುದಾಗಿದೆ.

ಮಾರಾಟದ ಸ್ಥಳಗಳನ್ನು ಗುರುತಿಸಲು ಪ್ಲೇ ಸ್ಟೋರ್‌ನಲ್ಲಿ ನನ್ನ ಫಾಸ್ಟ್ ಟ್ಯಾಗ್‌ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಹಾಗೂ ಎನ್‌ಎಚ್‌ಎಐ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿ ಸಂಖ್ಯೆ 1033ಗೆ ಕರೆಮಾಡಿ ಹತ್ತಿರದ ಮಾರಾಟ ಸ್ಥಳ ತಿಳಿದುಕೊಳ್ಳಬಹುದಾಗಿದೆ.

ಶೇ.2.5ರಷ್ಟು ಕ್ಯಾಶ್ ಬ್ಯಾಕ್...

ಫಾಸ್ಟ್ ಟ್ಯಾಗ್‌ನ ಬೆಲೆ 100 ರೂ.ಗಳಾಗಿದ್ದು, ಖರೀದಿ ವೇಳೆ 150-200 ರೂ. ಭದ್ರತಾ ಶುಲ್ಕ ಇಡಬೇಕು. ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಕನಿಷ್ಟ 100 ರೂ. ಮೊತ್ತ ಇರಬೇಕಾಗುತ್ತದೆ. ಈ ಫಾಸ್ಟ್ ಟ್ಯಾಗ್ ಮೂಲಕವೇ ಹೆದ್ದಾರಿ ಬಳಕೆದಾರರ ಶುಲ್ಕ ಪಾವತಿಯಾಗುತ್ತದೆ. ಪ್ರತಿ ಬಾರಿ ಪಾವತಿ ಮಾಡಿದಾಗ ಶೇ.2.5ರಷ್ಟು ಕ್ಯಾಶ್ ಬ್ಯಾಕ್ ದೊರೆಯಲಿದೆ. 2020ರ ಮಾ.31ರವರೆಗೆ ಈ ರಿಯಾಯಿತಿ ಸೌಲಭ್ಯ ಇರಲಿದೆ.

ಫಾಸ್ಟ್ ಟ್ಯಾಗ್ ಟೋಲ್ ಪ್ಲಾಜಾದಲ್ಲಿ ಇಕ್ಕಟ್ಟು, ಅಡಚಣೆ ನಿವಾರಣೆ ಮತ್ತು ದಟ್ಟಣೆಯ ತಡೆರಹಿತ ಸಂಚಾರವನ್ನು ಸುಗಮಗೊಳಿಸುವುದಲ್ಲದೆ, ಇಂಧನ ಬಳಕೆ ಉಳಿಸುತ್ತದೆ ಮತ್ತು ವಾಯುಮಾಲಿನ್ಯ ತಡೆಗಟ್ಟುವುದರ ಜತೆಗೆ ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದಾಗಿದೆ.

-ಶ್ರೀಧರ್, ಎನ್‌ಎಚ್‌ಎಐನ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ.

Writer - -ಯುವರಾಜ್ ಮಾಳಗಿ

contributor

Editor - -ಯುವರಾಜ್ ಮಾಳಗಿ

contributor

Similar News