ಲಕ್ಷಾಂತರ ಬೆಲೆಯ ವಾಚ್ ಕಟ್ಟುವುದು ಯಾವ ಬಗೆಯ ಸಮಾಜವಾದಿತನ:? ಸಿದ್ದು ವಿರುದ್ಧ ಡಿವಿಎಸ್ ವಾಗ್ದಾಳಿ

Update: 2019-11-23 17:09 GMT

ಬೆಂಗಳೂರು, ನ.23: ನನ್ನ ರಾಜಕೀಯ ಜೀವನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಲ್ಲಿ ಎಂದೂ ಸಮಾಜವಾದವನ್ನು ಕಂಡಿಲ್ಲ. ಅವರು ಕೇವಲ ತೋರ್ಪಡಿಕೆಗೆ ಮಾತ್ರ ಸಮಾಜವಾದಿಯಾಗಿದ್ದಾರೆಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ. 

ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜವಾದಿ ಹಿನ್ನೆಲೆಯಿಂದ ಬಂದವನೆಂದು ಸದಾ ಹೇಳಿಕೊಳ್ಳುವ ಸಿದ್ದರಾಮಯ್ಯ ಲಕ್ಷಾಂತರ ಬೆಲೆ ಬಾಳುವ ವಾಚ್ ಕಟ್ಟಿಕೊಂಡು ಜೀವನ ನಡೆಸುವುದು ಯಾವ ಬಗೆಯ ಸಮಾಜವಾದಿತನವೆಂದು ತಿಳಿಸಿದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಕಾರ್ಯಕರ್ತರೇ ಸಿಗುತ್ತಿಲ್ಲ. ಹೀಗಾಗಿ ಈ ಪಕ್ಷಗಳ ನಾಯಕರು ಹತಾಶರಾಗಿ ಬಿಜೆಪಿ ವಿರುದ್ಧ ಟೀಕೆ ಮಾಡುವುದನ್ನೇ ಪ್ರಮುಖ ಅಸ್ತ್ರಮಾಡಿಕೊಂಡಿದ್ದಾರೆಂದು ಅವರು ಆರೋಪಿಸಿದ್ದಾರೆ. 15 ಕ್ಷೇತ್ರಗಳ ಉಪಚುನಾವಣೆಯಲ್ಲಿ 15ನ್ನೂ ಬಿಜೆಪಿ ಗೆಲ್ಲಲಿದೆ. ಫಲಿತಾಂಶದ ನಂತರ ನಮ್ಮ ಸರಕಾರ ಮತ್ತಷ್ಟು ಭದ್ರವಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಹುಮ್ಮಸ್ಸಿನಿಂದ ಚುನಾವಣಾ ಪ್ರಚಾರದಲ್ಲಿ ತೊಡಗಬೇಕೆಂದು ಅವರು ಹೇಳಿದರು.

ಕೆ.ಆರ್.ನಗರ, ಹೊಸಕೋಟೆ ಸೇರಿದಂತೆ ಮತ್ತಿತರ ಕಡೆ ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಕೂಡಲೇ ಚುನಾವಣಾ ಆಯೋಗ ಇದನ್ನು ಸೂಕ್ಷ್ಮ ಕ್ಷೇತ್ರಗಳೆಂದು ಘೋಷಣೆ ಮಾಡುವ ಮೂಲಕ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದರು.

ಪರಿಶ್ರಮದ ಬಗ್ಗೆ ಮಾತನಾಡುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತಮ್ಮ ಶ್ರಮ ಯಾವ ಪಂಚತಾರಾ ಹೊಟೇಲ್‌ನಲ್ಲಿ ಇತ್ತೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಒಬ್ಬ ಶಾಸಕರನ್ನೂ ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಡಲಿಲ್ಲವೆಂದು ಅವರು ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News