ತನ್ವೀರ್ ಸೇಠ್ ಮೇಲಿನ ಹಲ್ಲೆ ಬಗ್ಗೆ ಮಾಧ್ಯಮಗಳಿಂದ ಉಹಾಪೋಹ, ಕಟ್ಟುಕತೆ ಸೃಷ್ಟಿ: ಎಸ್‍ಡಿಪಿಐ ಖಂಡನೆ

Update: 2019-11-23 17:36 GMT

ಮೈಸೂರು,ನ.3: ಶಾಸಕ ತನ್ವೀರ್ ಸೇಠ್ ಮೇಲಿನ ಹತ್ಯೆಗೆ ಸಂಬಂಧಿಸಿದಂತೆ ಕೆಲ ಮಾಧ್ಯಮಗಳು ಉಹಾಪೋಹಗಳನ್ನು ಹಾಗೂ ಕಟ್ಟುಕತೆಗಳನ್ನು ತೇಲಿಬಿಟ್ಟು ಎಸ್‍ಡಿಪಿಐ ಪಕ್ಷದ ಜೊತೆಗೆ ತಳುಕು ಹಾಕುವಂತಹ ಪ್ರಯತ್ನಗಳಲ್ಲಿ ತೊಡಗಿಕೊಂಡಿವೆ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವವರ ಪೈಕಿ ಇಬ್ಬರು ಎಸ್‍ಡಿಪಿಐನವರು. ಹಾಗಂತ ನಾವು ವಕಾಲತ್ತು ವಹಿಸುತ್ತಿಲ್ಲ. ಆದರೆ ಬಂಧಿತರ ಕುಟುಂಬಸ್ಥರು ಅವರನ್ನು ಭೇಟಿಯಾಗಲು ಪೊಲೀಸರು ಅವಕಾಶ ನೀಡುತ್ತಿಲ್ಲ. ವಕೀಲರೊಂದಿಗೂ ಮಾತನಾಡಲು ವ್ಯವಸ್ಥೆ ಮಾಡುತ್ತಿಲ್ಲ. ಇದು ನಿಜಕ್ಕೂ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಪೊಲೀಸರ ಮೇಲೆ ಯಾವುದೋ ಒತ್ತಡ ಕೆಲಸ ಮಾಡುತ್ತಿರಬಹುದು ಎನಿಸುತ್ತದೆ ಎಂದರು.

ಎಸ್‍ಡಿಪಿಐ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ. ಹಲ್ಲೆ ಪ್ರಕರಣದಲ್ಲಿ ಒಳಗೊಂಡ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತಹ ಸೂಕ್ತ ಕ್ರಮಗಳನ್ನು ಪೊಲೀಸರು ಕೈಗೊಳ್ಳಬೇಕು. ಸರ್ಕಾರದ ಒತ್ತಡಕ್ಕೆ ಮಣಿದು ಅಮಾಯಕರನ್ನು ಫಿಕ್ಸ್ ಮಾಡುವುದಾಗಲಿ ಅಥವಾ ಕಿರುಕುಳ ನೀಡುದಾಗಲಿ ಮಾಡಬಾರದು. ತನಿಖೆ ಏನಿದೆಯೋ ಅದನ್ನು ಪೊಲೀಸರು ಪ್ರಕಟಿಸಬೇಕು ಎಂದು ಕೋರಿದರು.

ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ಸುದ್ದಿ ಮಾಧ್ಯಮಗಳಲ್ಲಿ ವಿನಾಕಾರಣ ಎಸ್‍ಡಿಪಿಐ ಹೆಸರನ್ನು ಭಿತ್ತರಿಸಲಾಗುತ್ತಿದೆ. ಫರಾನ್ ಮೂರು ಪಕ್ಷಗಳಲ್ಲಿ ಕೆಲಸ ಮಾಡಿದವನಾಗಿದ್ದಾನೆ. ಆದರೆ ಆತನ ಹೆಸರಿನಲ್ಲಿ ಎಸ್‍ಡಿಪಿಐ ಎಂಬ ಪರ್ಯಾಯ ಪಕ್ಷವನ್ನು ತುಳಿಯಲು ಇತರೆ ಪಕ್ಷಗಳು ಸಂಚು ನಡೆಸುತ್ತಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಪಿಎಫ್‍ಐ ಜತೆಗೆ ಹಿಂದೂಪರ ಸಂಘನೆಗಳ ಮೇಲಿದ್ದ ಕೇಸುಗಳನ್ನೂ ವಾಪಸ್ಸು ಪಡೆದಿದ್ದಾರೆ. ಅಲ್ಲದೆ ಅವರು ಎಂದೂ ಎಸ್‍ಡಿಪಿಐ ಮೇಲೆ ಆರೋಪ ಮಾಡಿಲ್ಲ. ಸುದ್ದಿ ಮಾಧ್ಯಮಗಳಲ್ಲಿ ತಪ್ಪು ತಪ್ಪಾಗಿ ಬರೆಯಲಾಗಿದೆ. ಇದು ಹೀಗೆಯೇ ಆದರೆ ಜೈಲ್ ಭರೋ ಚಳವಳಿಗೂ ಮುಂದಾಗುತ್ತವೆ ಎಂದು ಮಜೀದ್ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಅಮ್ಜದ್ ಖಾನ್, ಕುಮಾರಸ್ವಾಮಿ ಉಪಸ್ಥಿತರಿದ್ದರು.

ತನ್ವೀರ್ ಸೇಠ್ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾಗಲಿ ಅಥವಾ ತನ್ವೀರ್ ಸೇಠ್ ಅವರು ಡಿಕೆಶಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಚಾರವನ್ನಾಗಲಿ ಮಾಧ್ಯಮಗಳು ಹೇಳುತ್ತಿಲ್ಲ. ಕಾಂಗ್ರೆಸ್‍ನಲ್ಲಿ ಎರಡು ಗುಂಪುಗಳ ಬಗ್ಗೆ ಹೇಳದೆ, ನೇರವಾಗಿ ಎಸ್‍ಡಿಪಿಐ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿವೆ. ಈ ಮೂಲಕ ಎಸ್‍ಡಿಪಿಐ ಸಿಲುಕಿಸುವ ಹುನ್ನಾರ ನಡೆಯುತ್ತಿದೆ
- ಅಬ್ದುಲ್ ಮಜೀದ್, ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News