×
Ad

ಎಂಟಿಬಿ ನಾಗರಾಜ್ ಕ್ಷಮೆಯಾಚನೆಗೆ ಆಗ್ರಹ: ಹೋರಾಟದ ಎಚ್ಚರಿಕೆ ನೀಡಿದ ಪುಷ್ಪಾ ಅಮರನಾಥ್

Update: 2019-11-23 23:18 IST

ಮೈಸೂರು,ನ.23: ಹೊಸಕೋಟೆ ಕಾಂಗ್ರೆಸ್ ಪಕ್ಷದ ಮಹಿಳಾ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರ ವಿರುದ್ಧ ಕೇವಲವಾಗಿ ಮಾತನಾಡಿರುವ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಹೋರಾಟ ಮಾಡುವುದಾಗಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಎಚ್ಚರಿಕೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಸೋಲುವ ಭಯದಿಂದ ಓರ್ವ ಮಹಿಳಾ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರ ಬಗ್ಗೆ ಚುನಾವಣೆಯಲ್ಲಿ ಗೆದ್ದು ಆಯಮ್ಮ ಏನು ಮಾಡಲು ಸಾಧ್ಯ ಎಂದು ಕೇವಲವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆ ಪದ್ಮಾವತಿ ಸುರೇಶ್ ಅವರಿಗಲ್ಲದೆ ಮಹಿಳಾ ವಲಯಕ್ಕೆ ಅವಮಾನವಾಗಿದ್ದು ಕೂಡಲೇ ಕ್ಷಮೆಯಾಚಿಸಬೇಕು ಎಂದು ಹೇಳಿದರು.

ಓರ್ವ ಮಹಿಳೆಯಾಗಿ ಇಂದಿರಾಗಾಂಧಿ ಅವರು ಪ್ರಧಾನಿಯಾಗಿ ದೇಶವನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. ತಮಿಳುನಾಡಿನಲ್ಲಿ ಜಯಲಲಿತ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಆಡಳಿತ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ, ಮಾಯಾವತಿ, ಸೇರಿದಂತೆ ಅನೇಕರು ಮಹಿಳೆಯರೆ, ಬಿಜೆಪಿಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹ ಮಹಿಳೆ. ಅವರೆಲ್ಲರೂ ಉತ್ತಮ ಆಡಳಿತ ನಡೆಸುತ್ತಿಲ್ಲವೇ? ಅಂತಹದರಲ್ಲಿ ಪದ್ಮಾವತಿ ಅವರ ಬಗ್ಗೆ ಕೇವಲವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು: ರಾಜ್ಯದ 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಈಗಾಗಲೇ ರಾಜ್ಯಾದ್ಯಂತ ನಾನು ಪ್ರವಾಸ ಮಾಡಿದ್ದು ಉತ್ತಮ ರೀತಿಯಲ್ಲಿ ಕಾಂಗ್ರೆಸ್ ಪಕ್ಷದ ಪರ ಜನ ನಿಂತಿದ್ದಾರೆ. ಅನರ್ಹ ಶಾಸಕರನ್ನು ಸೋಲಿಸಲು ಜನ ತೀರ್ಮಾನಿಸಿದ್ದು, ಅನರ್ಹರರನ್ನು ಮತ್ತೆ ಚುನಾವಣೆಗೆ ನಿಲ್ಲಲು ಅವಕಾಶ ಕಲ್ಪಿಸಿದ್ದು ಒಳ್ಳೆಯದೇ ಆಯಿತು ಎಂದು ಹೇಳಿದರು.

ಸ್ವಾರ್ಥಕ್ಕಾಗಿ ತಮ್ಮನ್ನು ಮಾರಿಕೊಂಡು ಮತ್ತೆ ಜನರ ಬಳಿ ಬಂದಿದ್ದಾರೆ. ಅವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಸ್ವಾರ್ಥವೋ, ಸ್ವಾಭಿಮಾನವೋ ತೀರ್ಮಾನವಾಗಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನೂತನ ಮೈಸೂರು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮೈಸೂರು ನಗರ ಉಪಾಧ್ಯಕ್ಷೆ ಸುಜಾತಾ ರಾವ್, ಮಮತ, ರಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News