ರಾಜ್ಯಸಭಾ ಉಪಚುನಾವಣೆ: ನಾಳೆ ಅಧಿಸೂಚನೆ ಪ್ರಕಟ
ಬೆಂಗಳೂರು, ನ. 24: ಕೆ.ಸಿ.ರಾಮಮೂರ್ತಿ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಡಿ.12ಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ನಾಳೆ(ನ.25) ಅಧಿಸೂಚನೆ ಪ್ರಕಟವಾಗಲಿದೆ.
ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಡಿ.2ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಡಿ.3ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಡಿ.5ರಂದು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನ. ಆದರೆ, ಆಡಳಿತಾರೂಢ ಬಿಜೆಪಿ, ವಿಪಕ್ಷ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ.
ವಿಧಾನಸಭೆಯ ಪ್ರಸ್ತುತ ರಾಜಕೀಯ ಪಕ್ಷಗಳ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗುವ ಸಾಧ್ಯತೆಯಿದೆ. ಸ್ಪೀಕರ್ ಸೇರಿ 207 ಸಂಖ್ಯಾಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ-104, ವಿಪಕ್ಷ ಕಾಂಗ್ರೆಸ್- 66 ಹಾಗೂ ಜೆಡಿಎಸ್-34, ಬಿಎಸ್ಪಿ-1 ಹಾಗೂ ಪಕ್ಷೇತರ 1 ಸದಸ್ಯರ ಸಂಖ್ಯಾಬಲ ಇದೆ.
ಒಂದು ಸ್ಥಾನ ಆಯ್ಕೆಗೆ ಉಪಚುನಾವಣೆ ನಡೆಯುತ್ತಿರುವುದರಿಂದ ಯಾವುದೇ ಅಭ್ಯರ್ಥಿ ಗೆಲ್ಲಲು ಕನಿಷ್ಠ 104 ಸದಸ್ಯರ ಮತವನ್ನು ಪಡೆಯಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ಡಿ.12ರಂದು ಮತದಾನ ನಡೆಯಲಿದ್ದು, ಅಂದೇ ಮತ ಎಣಿಕೆಯೂ ನಡೆದು, ಫಲಿತಾಂಶ ಹೊರ ಬೀಳಲಿದೆ.