ಉಪಚುನಾವಣೆಯಲ್ಲಿ ವೀರಶೈವರು ನಮ್ಮನ್ನು ಕೈಬಿಡುವುದಿಲ್ಲ: ಸಿಎಂ ಯಡಿಯೂರಪ್ಪ
ಬೆಳಗಾವಿ, ನ. 24: ಉಪಚುನಾವಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯ ನಮ್ಮ ಕೈಬಿಡುವುದಿಲ್ಲ. ಯಾವುದೇ ಸಂದರ್ಭದಲ್ಲಿಯೂ ವೀರಶೈವರು ನಮ್ಮನ್ನು ಕೈಬಿಟ್ಟಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಹದಿನೈದು ಅನರ್ಹ ಶಾಸಕರ ಪ್ರಯತ್ನದಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ. ಹೀಗಾಗಿ ಸಣ್ಣ-ಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ವೀರಶೈವರು ಹದಿನೈದು ಕ್ಷೇತ್ರಗಳಲ್ಲಿಯೂ ನಮ್ಮನ್ನು ಬೆಂಬಲಿಸಿಬೇಕು ಎಂದು ಕೋರಿದರು.
ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ, ಗೋಕಾಕ್ ಕ್ಷೇತ್ರಗಳಲ್ಲಿ ನಿನ್ನೆ ನಡೆದ ಪ್ರಚಾರ ಸಭೆಗಳಿಗೆ ನಿರೀಕ್ಷೆಗೂ ಮೀರಿ ಜನರು ಸೇರಿದ್ದರು. ರಮೇಶ್ ಜಾರಕಿಹೊಳಿ ಕ್ಷೇತ್ರ ಗೋಕಾಕದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಸಭೆ ಮಾಡಲಾಯಿತು. ಹದಿನೈದು ಕ್ಷೇತ್ರಗಳಲ್ಲೂ ನಿರೀಕ್ಷೆಗೂ ಮೀರಿ ಬಿಜೆಪಿ ಜಯಗಳಿಸಲಿದೆ ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಏನೇ ಹೇಳಿದರೂ ನಾವು ಎಲ್ಲ ಕಡೆಗಳಲ್ಲೂ ಗೆಲ್ಲುತ್ತೇವೆ ಎಂದ ಅವರು, ಮುಂದಿನ ಮೂರೂವರೆ ವರ್ಷ ರಾಜ್ಯದ ಅಭಿವೃದ್ಧಿ ಕಾರ್ಯಗಳತ್ತ ಗಮನ ನೀಡುತ್ತೇವೆ. ಅಲ್ಲದೆ, ಅನರ್ಹರಿಗೆ ನೀಡಿದ ಭರವಸೆ ಈಡೇರಿಸುತ್ತೇವೆ ಎಂದರು.
ಯಾರ ವಿರುದ್ಧದ ಹೋರಾಟ ಎನ್ನುವುದು ಡಿ.9ರಂದು ಬಹಿರಂಗಗೊಳ್ಳಲಿರುವ ಉಪಚುನಾವಣಾ ಫಲಿತಾಂಶ ಬಂದ ಮೇಲೆ ಗೊತ್ತಾಗಲಿದೆ. ಗೋಕಾಕ್ ಕ್ಷೇತ್ರದಲ್ಲಿ ನಿನ್ನೆ ನಡೆದ ಸಮಾವೇಶಕ್ಕೆ ವಿಜಯೋತ್ಸವ ರೀತಿ 35 ಸಾವಿರಕ್ಕಿಂತ ಹೆಚ್ಚು ಜನರು ಸೇರಿದ್ದರು ಎಂದು ಹೇಳಿದರು.