"ಹೆಣ್ಣಾಗಿ 1,800 ಕೋಟಿ ರೂ. ಅನುದಾನ ತಂದಿದ್ದೇನೆ, ಗಂಡಸರಾಗಿ ನೀವೇಕೆ ತರಲಿಲ್ಲ"

Update: 2019-11-24 13:47 GMT

ಬೆಳಗಾವಿ, ನ. 24: ಹೆಣ್ಣು ಮಗಳಾಗಿ ನಾನು ನನ್ನ ಕ್ಷೇತ್ರಕ್ಕೆ 1,800 ಕೋಟಿ ರೂ.ಗಳನ್ನು ತಂದಿದ್ದೇನೆ ಎಂದರೆ ನೀವು ‘ಗಂಡಸರು-ಸ್ವಾಭಿಮಾನಿಗಳು’ ನೀವೇಕೆ ಕ್ಷೇತ್ರಕ್ಕೆ ಹಣ ತರಲಿಲ್ಲ? ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಂದಿಲ್ಲಿ ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಯನ್ನು ಪ್ರಶ್ನಿಸಿದ್ದಾರೆ.

ರವಿವಾರ ಅಥಣಿ ಕ್ಷೇತ್ರದ ಕಕಮರಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಮೈತ್ರಿ ಸರಕಾರದಲ್ಲಿ ಅನುದಾನ ಸಿಗಲಿಲ್ಲ ಎಂಬ ನೆಪ ಹೇಳಿ ರಾಜೀನಾಮೆ ನೀಡಿದ್ದೀರಿ. ಆಗ ಬಾಯಿಗೆ ಕಡುಬು ಇಟ್ಟುಕೊಂಡಿದ್ರಾ, ಕೇಳೋಕೆ ಆಗುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಸಚಿವರನ್ನು ಭೇಟಿಯಾಗಿ ಕೈ ಮುಗಿಯಲು ಆಗುವುದಿಲ್ಲವೇ? ಕೊಟ್ಟ ಕುದುರೆಯನ್ನು ಬಿಟ್ಟು ಇನ್ನೊಂದನ್ನು ಏರುತ್ತೇನೆ ಎನ್ನುವವನೂ ವೀರನೂ ಅಲ್ಲ, ಶೂರನೂ ಅಲ್ಲ ಎಂದು ಟೀಕಿಸಿದ ಅವರು, ಇನ್ನೊಬ್ಬರು ದುಡಿದು ಊಟ ಮಾಡಿದ್ದಾರೆಂದು ಹೊಟ್ಟೆ ಉರಿದುಕೊಳ್ಳದೇ, ನಾವೂ ದುಡಿದು ಉಣ್ಣಬೇಕು ಎಂದು ಸಲಹೆ ಮಾಡಿದರು.

ದುಡಿದು ಉಣ್ಣುವುದು ಗಂಡಸ್ತನ. ಅದನ್ನು ಬಿಟ್ಟು ಸೋಗು ಹಾಕಿಕೊಂಡಿದ್ದರೆ ಏನೂ ಆಗುವುದಿಲ್ಲ. ಅತಿ ವಿನಯ ಚೋರನ ಲಕ್ಷಣ ಎಂದು ಕುಮಟಳ್ಳಿ ವಿರುದ್ಧ ವಾಗ್ದಾಳಿ ನಡೆಸಿದ ಲಕ್ಷ್ಮಿ ಹೆಬ್ಬಾಳ್ಕರ್, ಮಳ್ಳ ಮಳ್ಳ ಮಂಚಕ್ಕೆಷ್ಟು ಕಾಲ ಎಂದರೆ, ಮೂರು ಇನ್ನೊಂದು ಎನ್ನುವ ಮಳ್ಳನಂತೆ ನಟಿಸಿ ಜನರಿಗೆ ದ್ರೋಹ ಮಾಡಿದ ಮಹೇಶ ಕುಮಠಳ್ಳಿ ಅವರಿಗೆ ಮತದಾರರು ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

ಮಹೇಶ್ ಕುಮಟಳ್ಳಿಗೆ 2013 ಹಾಗೂ 2018ರ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಲು ನಾನೂ ಸಹಾಯ ಮಾಡಿದ್ದೆ. ಏನೋ ಒಳ್ಳೆಯವರಿದ್ದಾರೆ, ಇಂಜಿನಿಯರ್ ಇದ್ದಾರೆ. ಅವರಿಂದ ಕ್ಷೇತ್ರ ಜನರಿಗೆ ಅನುಕೂಲವಾಗುತ್ತದೆ ಎಂದು ಭಾವಿಸಿ ನೆರವಾಗಿದ್ದೆ. ಆದರೆ, ಅವರು ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹಾಲು ಕುಡಿದ ಮಕ್ಕಳೇ ಬದುಕುತ್ತಿಲ್ಲ, ಇನ್ನೂ ವಿಷ ಕುಡಿದಂತಹ ಈ ಮಕ್ಕಳು ಬದುಕುತ್ತಾರೆಯೇ? ನೀವೇ ವಿಚಾರ ಮಾಡಿ. ಜನ್ಮ ಕೊಟ್ಟ ತಾಯಿ ಒಬ್ಬಳಾದರೆ, ಜಗತ್ತನ್ನು ತೋರಿಸಿದಂತೆ ಇನ್ನೊಬ್ಬ ತಾಯಿಯೇ ಪಕ್ಷ. ಮಹೇಶ್ ಕುಮಟಳ್ಳಿ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆಂದು ಲಕ್ಷ್ಮಿ ಹೆಬ್ಬಾಳ್ಕರ್ ದೂರಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಜಾನನ ಮಂಗಸೂಳಿ ಅವರನ್ನು ಗೆಲ್ಲಿಸುವ ಮೂಲಕ ನನ್ನ ಮರ್ಯಾದೆ ಉಳಿಸಬೇಕು. ಬೆಳಗಾವಿ ಜಿಲ್ಲೆಯ ರಾಜಕಾರಣ ಬದಲಾಗಬೇಕು. ಅಭಿವೃದ್ಧಿಯಾಗಬೇಕು. ಕೈಗಾರಿಕೆಗಳು ಬರಬೇಕು. ಯುವಕರಿಗೆ ಕೆಲಸ ಸಿಗಬೇಕು ಎಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News