ಪ್ರತಾಪ್ ಸಿಂಹಗೆ ತಟ್ಟಿದ ರೈತರ ಪ್ರತಿಭಟನೆ ಬಿಸಿ: ಸಂಸದರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ

Update: 2019-11-24 16:45 GMT

ಮೈಸೂರು,ನ.24: ರೈತರು ಬೆಳೆಯುವ ತಂಬಾಕಿಗೆ ಸೂಕ್ತ ಬೆಲೆ ಒದಗಿಸುವಲ್ಲಿ ರಾಜ್ಯದ ಸಂಸದರು ವಿಫರಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸಂಸದ ಪ್ರತಾಪ್ ಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ರವಿವಾರ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಮತ್ತು ರಾಜ್ಯದಿಂದ ಆಯ್ಕೆಯಾಗಿರುವ ಸಂಸದರ ವಿರುದ್ಧ ಧಿಕ್ಕಾರ ಕೂಗಿದರು.

ತಂಬಾಕು ಬೆಳೆಗಾರರ ಸಮಸ್ಯೆ ಹೇಳಲು ಹಲವು ಬಾರಿ ಸಂಸದ ಪ್ರತಾಪ್ ಸಿಂಹ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರೂ ಅವರು ಸಿಗಲಿಲ್ಲ. ಜೊತೆಗೆ ದೂರವಾಣಿ ಮೂಲಕ ಮಾತನಾಡಲು ಪ್ರಯತ್ನಿಸಿದರೂ ಕರೆ ಸ್ವೀಕರಿಸದೆ ಉದ್ಧಟತನ ತೋರಿದ್ದರು ಎಂದು ಇಂದು ಬೆಳಗ್ಗೆ ಸಂಸದ ಪ್ರತಾಪ್ ಸಿಂಹ ಅವರ ಮನೆ ಎದುರು ಪ್ರತಿಭಟನೆಗೆ ರೈತರು ಮುಂದಾಗಿದ್ದರು. ವಿಷಯ ಅರಿತ ಸಂಸದ ಪ್ರತಾಪ್ ಸಿಂಹ, ಜಲದರ್ಶಿನಿ ಅತಿಥಿ ಗೃಹದಲ್ಲಿರುವ ಕಚೇರಿ ಬಳಿಗೆ ಬರುವಂತೆ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ರೈತರು ಜಲದರ್ಶಿನಿ ಅತಿಥಿಗೃಹದಲ್ಲಿರುವ ಸಂಸದರ ಕಚೇರಿ ಮುಂದೆ ಆಗಮಿಸಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ರೊಚ್ಚಿಗೆದ್ದ ರೈತರು, ತಂಬಾಕು ಬೆಳೆಗಾರರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಅವರ ನೋವನ್ನು ಯಾರೂ ಕೇಳುವವರಿಲ್ಲ. ಕೇಂದ್ರ ಸರ್ಕಾರ ತಂಬಾಕಿಗೆ ಸೂಕ್ತ ಬೆಲೆ ನೀಡದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದ ತಂಬಾಕು 6 ದೇಶಗಳಿಗೆ ರಫ್ತಾಗುತ್ತಿದೆ. ಆದರೆ ತಂಬಾಕು ಬೆಳೆದ ರೈತನಿಗೆ ಕನಿಷ್ಠ ದರ ಕೂಡ ಸಿಗುತ್ತಿಲ್ಲ. ಆದರೆ ಪಕ್ಕದ ಆಂಧ್ರಪ್ರದೇಶದಲ್ಲಿ ಮೊದಲನೆಯ ಶ್ರೇಣಿಯ ತಂಬಾಕಿಗೆ 225 ರೂ. ನೀಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಬೆಳೆದ ಮೊದಲ ಶ್ರೇಣಿಯ ತಂಬಾಕಿಗೆ 175 ರೂ.ಗಳು ಮಾತ್ರ ನೀಡಲಾಗುತ್ತಿದೆ. ಎಷ್ಟು ಮನವಿ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಹಲವು ಬಾರಿ ತಂಬಾಕು ಬೆಳೆಗಾರರ ಸಭೆ ಕರೆದು ನಿಮ್ಮನ್ನು ಆಹ್ವಾನಿಸಿದರೂ ಸೌಜನ್ಯಕ್ಕಾದರೂ ನೀವು ಬರಲಿಲ್ಲ. ಯಾವುದೇ ರೀತಿಯಲ್ಲೂ ಸ್ಪಂದಿಸಲಿಲ್ಲ. ಹಾಗಾಗಿ ಇಂದು ನಿಮ್ಮ ಮನೆ ಮುಂದೆ ಪ್ರತಿಭಟನೆಗೆ ಮುಂದಾದೆವು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ತಂಬಾಕು ಬೆಳೆಗಾರರ ಕಷ್ಟಕ್ಕೆ ನಾನು ಸಾಕಷ್ಟು ಬಾರಿ ಸ್ಪಂದಿಸಿದ್ದೇನೆ. ತಂಬಾಕಿಗೆ ಬೆಲೆ ನಿಗದಿ ಪಡಿಸುವುದು ನನ್ನ ಕೈಯಲ್ಲಿ ಇಲ್ಲ. ಆದರೂ ಸಹ ನಾನು ನಿಮ್ಮ ಪರವಾಗಿ ಹೋರಾಟ ಮಾಡುತ್ತೇನೆ. ನಿಮ್ಮ ಜೊತೆಗೂಡಿ ಮಂಡ್ಯ, ಚಾಮರಾಜನಗರ ಕ್ಷೇತ್ರದ ಸಂಸದರ ಜೊತೆ ಮಾತನಾಡಿ ಕೇಂದ್ರಕ್ಕೆ ನಿಯೋಗ ಹೋಗಿ ಸಂಬಂದಪಟ್ಟವರ ಬಳಿ ಒತ್ತಾಯ ಮಾಡುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಹೊಸೂರು ಕುಮಾರ್, ಪಿ.ಮರಂಕಯ್ಯ, ಹೊಸಕೋಟೆ ಬಸವರಾಜು, ಬಕ್ಕಳ್ಳಿ ನಂಜುಂಡಸ್ವಾಮಿ, ಪಿ.ಜೆ.ಶಿವಣ್ಣ ಶೆಟ್ಟಿ, ಪ್ರಕಾಶ್‍ರಾಜೇ ಅರಸ್, ಸ್ವಾಮಿಗೌಡ, ಬೆಂಕಿಪುರ ಚಿಕ್ಕಣ್ಣ, ರಾಮೇಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News