ಎಚ್.ವಿಶ್ವನಾಥ್ ಸಿದ್ಧಾಂತವಿಲ್ಲದ ರಾಜಕೀಯದ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ: ದಿನೇಶ್ ಗುಂಡೂರಾವ್
ಮೈಸೂರು,ನ.24: ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರು ರಾಜಕೀಯ ಮೌಲ್ಯ ಹಾಗೂ ಸಿದ್ಧಾಂತವಿಲ್ಲದ ರಾಜಕೀಯದ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದರು.
ಹಲ್ಲೆಗೊಳಗಾಗಿ ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್ ಸೇಠ್ ಅವರನ್ನು ರವಿವಾರ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಅನರ್ಹ ಶಾಸಕ ಎಚ್.ವಿಶ್ವನಾಥ್ ತಮ್ಮ ಸಿದ್ಧಾಂತವನ್ನು ಮಾರಿಕೊಂಡಿದ್ದಾರೆ. ಅವರಿಗೆ ಹುಣಸೂರಿನ ಜನರಲ್ಲಿ ಮತ ಕೇಳಲು ಯಾವ ನೈತಿಕತೆಯೂ ಇಲ್ಲ, ಈ ಬಾರಿ ಹುಣಸೂರಿನ ಜನ ಅವರನ್ನು ಬಾರಿ ಅಂತರದಿಂದ ಸೋಲಿಸಲಿದ್ದಾರೆ ಎಂದು ಹೇಳಿದರು. ನಮ್ಮ ಎಲ್ಲಾ ನಾಯಕರು ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುತ್ತಿದ್ದು, ಕಾಂಗ್ರೆಸ್‍ಗೆ ಒಳ್ಳೆಯ ಫಲಿತಾಂಶ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಈಗಾಗಲೇ ಒಂದು ಸುತ್ತು ಹುಣಸೂರಿನಲ್ಲಿ ಪ್ರಚಾರ ಮುಗಿಸಿದ್ದು, ಇಂದಿನಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರಚಾರಕ್ಕೆ ಬರುತ್ತಿದ್ದಾರೆ. ಬಿಜೆಪಿಯವರು ಸುಖಾಸುಮ್ಮನೆ ಸಿದ್ದರಾಮಯ್ಯ ಏಕಾಂಗಿ ಎಂದು ಹೇಳುವ ಮೂಲಕ ತಾವು ಮಾಡಿದ ಸಂವಿಧಾನ ಬಾಹಿರ ಕೆಲಸಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನರ್ಹ ಶಾಸಕರ ಬಗ್ಗೆ ಜನರಲ್ಲಿ ಬೇಸರವಿದೆ. ಈ ಬಾರಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆಲ್ಲುತ್ತದೆ. ಬಿಜೆಪಿಗೆ ಮುಖಭಂಗವಾಗಲಿದೆ ಎಂದು ಹೇಳಿದರು.