ಸಂಸದ ಭಗವಂತ ಖೂಬಾ ವಿರುದ್ಧ ಜನವಾದಿ ಮಹಿಳಾ ಸಂಘಟನೆ ಆಕ್ರೋಶ: ಕಾರಣ ಇಲ್ಲಿದೆ...
ಕಲಬುರಗಿ, ನ.24: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಆಳಂದ ಹಾಗೂ ಚಿಂಚೋಳಿ ತಾಲೂಕಿನಲ್ಲಿ ಕೆರೆಗಳ ಹೂಳು ಎತ್ತುವ ಕೆಲಸ ನಿಲ್ಲಿಸಿ ಎಂಬ ಸಂಸದ ಭಗವಂತ ಖೂಬಾ ಹೇಳಿಕೆಯನ್ನು ಖಂಡಿಸುತ್ತೇವೆ. ಇಂತಹ ಹೇಳಿಕೆ ಖೂಬಾ ಅವರಿಗೆ ಶೋಭೆ ತರುವುದಿಲ್ಲ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಹೇಳಿದ್ದಾರೆ.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಯೋಗಖಾತ್ರಿ ಯೋಜನೆಯ ಬಗ್ಗೆ ಖೂಬಾ ಅವರು ತಿಳಿದುಕೊಳ್ಳುವ ಕೆಲಸಕ್ಕೆ ಮುಂದಾಗಬೇಕು. ಇದು ಕೇವಲ ಒಂದು ಯೋಜನೆ ಅಲ್ಲ. ಅದು ಜನರ ಕಾಯ್ದೆ. ಈ ಹೇಳಿಕೆಯನ್ನು ಖೂಬಾ ಅವರು ವಾಪಸ್ ಪಡೆಯದಿದ್ದರೆ ಅವರಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣವಾಗಿ ಬಲಪಡಿಸಬೇಕು. ಮೋದಿ ಸರಕಾರ ಬಜೆಟ್‌ನಲ್ಲಿ ಕೇವಲ 1 ಸಾವಿರ ಕೋಟಿ ಮಾತ್ರ ಹಣ ನೀಡುತ್ತದೆ. ಅದನ್ನು ಹೆಚ್ಚಿಸಬೇಕು. ಖಾತ್ರಿ ಯೋಜನೆಯಡಿ ಬಾಕಿ ಇರುವ ಹಣ ಬಿಡುಗಡೆಗೊಳಿಸಬೇಕು. ರಾಷ್ಟ್ರೀಯ ಸಂಪತ್ತು ನಿರ್ಮಾಣ ಮಾಡಿ ಎಂದು ಖೂಬಾ ಅವರಿಗೆ ಒತ್ತಾಯಿಸಿದರು.
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ 100 ದಿನದ ಕೆಲಸವನ್ನು 250ದಿನಕ್ಕೆ ಹೆಚ್ಚಿಸುವುದು ಸೇರಿ ಮತ್ತಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಉದ್ಯೋಗ ಖಾತ್ರಿ ಕೃತಿ ಕಾರ್ಮಿಕರ ಸಂಘಟನೆ ವತಿಯಿಂದ ಡಿ.16ರಂದು ಬೆಂಗಳೂರಿನಲ್ಲಿ ಬೃಹತ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.