​ಅಮೆರಿಕ ಅಧ್ಯಕ್ಷೀಯ ಚುನಾವಣೆ: ಕೋಟ್ಯಧಿಪತಿಗಳ ಕದನ

Update: 2019-11-25 03:34 GMT
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಮುಂದಿನ ವರ್ಷ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆ, ನ್ಯೂಯಾರ್ಕ್ ನಗರದ ಇಬ್ಬರು ಕೋಟ್ಯಧಿಪತಿಗಳ ನಡುವಿನ ಸಮರವಾಗಿ ಮಾರ್ಪಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸವಾಲೊಡ್ಡಲು ಡೆಮೋಕ್ರೆಟಿಕ್ ಪಕ್ಷದಲ್ಲಿ ಆಕಾಂಕ್ಷಿಗಳು ದೊಡ್ಡ ಸಂಖ್ಯೆಯಲ್ಲಿದ್ದರೂ, ಯಾರು ಅಭ್ಯರ್ಥಿಯಾಗುತ್ತಾರೆ ಎನ್ನುವುದು ಖಚಿತವಾಗಿಲ್ಲ. ನ್ಯೂಯಾರ್ಕ್‌ನ ಮಾಜಿ ಮೇಯರ್ ರೇಸ್‌ನಲ್ಲಿ ಮೈಕೆಲ್ ಬ್ಲೂಮ್‌ಬರ್ಗ್ ಅಧ್ಯಕ್ಷ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಹೊಸ ಸೇರ್ಪಡೆ.

ರವಿವಾರ ಈ ಸಂಬಂಧ ಹೇಳಿಕೆ ನೀಡಿದ ಬ್ಲೂಮ್‌ಬರ್ಗ್, "ಟ್ರಂಪ್ ಅವರ ದುರಾಡಳಿತ ಮತ್ತು ಅನೈತಿಕ ಕ್ರಮಗಳಿಗೆ ಮತ್ತೆ ನಾಲ್ಕು ವರ್ಷ ಅಮೆರಿಕದ ಜನತೆ ಅವಕಾಶ ನೀಡುವ ಸ್ಥಿತಿಯಲ್ಲಿಲ್ಲ" ಎಂದು ಹೇಳಿದ್ದಾರೆ.

"ನಮ್ಮ ದೇಶ ಹಾಗೂ ಮೌಲ್ಯಗಳ ಅಸ್ತಿತ್ವಕ್ಕೆ ಅಪಾಯವನ್ನು ಅವರು ಪ್ರತಿನಿಧಿಸುತ್ತಿದ್ದಾರೆ. ಅವರು ಮತ್ತೊಂದು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಆ ಹಾನಿಯಿಂದ ನಾವು ಚೇತರಿಸಿಕೊಳ್ಳಲಾಗದು. ನಾವು ಈ ಚುನಾವಣೆ ಗೆಲ್ಲಲೇಬೇಕು ಮತ್ತು ಅಮೆರಿಕದ ಪುನರ್ ನಿರ್ಮಾಣ ಮಾಡಬೇಕು" ಎಂದು ಟ್ರಂಪ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.

"ವ್ಯವಹಾರ, ಸರ್ಕಾರ ಮತ್ತು ದತ್ತಿ ಕಾರ್ಯಗಳ ವಿಶಿಷ್ಟ ಅನುಭವ ನನಗೆ ಚುನಾವಣೆ ಗೆಲ್ಲಲು ಮತ್ತು ಮುನ್ನಡೆ ಸಾಧಿಸಲು ಅನುಕೂಲವಾಗಲಿದೆ" ಎಂದು ಪ್ರಚಾರ ವೆಬ್‌ಸೈಟ್‌ನಲ್ಲಿ ಬ್ಲೂಮ್‌ಬರ್ಗ್ ಹೇಳಿಕೊಂಡಿದ್ದಾರೆ.

ಬ್ಲೂಮ್‌ಬರ್ಗ್ ಅವರ ಸಂಪತ್ತು 50 ಶತಕೋಟಿ ಡಾಲರ್ ಆಗಿದ್ದು, ಟ್ರಂಪ್ ಅವರಿಗಿಂತಲೂ ಶ್ರೀಮಂತರು. ವ್ಯಾಪಾರಿಗಳು ಮತ್ತು ಬ್ಯಾಂಕರ್‌ಗಳು ಮಾರುಕಟ್ಟೆ ಡಾಟಾ ಪಡೆದುಕೊಳ್ಳಲು ಅನುವಾಗುವ ತಂತ್ರಜ್ಞಾನ ಸಂಸ್ಥೆಯನ್ನು ಅವರು ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News