ಎಂಟಿಬಿ ನಾಗರಾಜ್ ಸೇರಿದಂತೆ ಅನರ್ಹ ಶಾಸಕರಿಗೆ ಡಿಕೆಶಿ ಪ್ರಶ್ನೆಗಳ ಸುರಿಮಳೆ

Update: 2019-11-25 10:28 GMT

ಹೊಸಕೋಟೆ: ಕಾಂಗ್ರೆಸ್ ಪಕ್ಷ ನಿಮಗೆ ಏನು ಮೋಸ ಮಾಡಿತ್ತು ? ಎಲ್ಲೋ ಇದ್ದ ನಿಮಗೆ ಚಿಹ್ನೆ ನೀಡಿ, ಗೆಲ್ಲಿಸಿ, ಶಾಸಕರನ್ನಾಗಿ, ಮಂತ್ರಿ-ಮಹೋದಯರನ್ನಾಗಿ ಮಾಡಿದ ಪಕ್ಷಕ್ಕೆ ಈ ರೀತಿ ದ್ರೋಹ ಮಾಡಿದ್ದು ಸರಿಯೇ ? ಇದು ಮಾತೃದ್ರೋಹ ಅಲ್ಲವೇ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಸೇರಿದಂತೆ ಅನರ್ಹ ಶಾಸಕರನ್ನು ಪ್ರಶ್ನಿಸಿದ್ದಾರೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರ ಪರ ರವಿವಾರ ಪ್ರಚಾರ ನಡೆಸಿದ ಡಿ.ಕೆ. ಶಿವಕುಮಾರ್, ಪಕ್ಷಕ್ಕೆ ದ್ರೋಹ ಬಗೆದವರಿಗೆ ಸರಿಯಾದ ಪಾಠ ಕಲಿಸಿ ಎಂದು ಕಾರ್ಯಕರ್ತರು ಹಾಗೂ ಮತದಾರರಿಗೆ ಕೈಮುಗಿದು ಕೇಳಿಕೊಂಡರು.

ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಶಿವಕುಮಾರ್ ಅವರು ಸಾಥ್ ನೀಡಿದರು. ಅವರು ಹೋದೆಡೆಯೆಲ್ಲ ‘ಡೀಕೆ, ಡೀಕೆ’ ಎಂಬ ಘೋಷಣೆಗಳು ಕೇಳಿಬಂದವು. ತಮಗೆ ಸಿಕ್ಕ ಅಭೂತಪೂರ್ವ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿ ಡಿಕೆಶಿ ಮಾತನಾಡಿದರು.

‘ನಾನು ಬಂದಾಗ ನೀವು ತೋರುತ್ತಿರುವ ಅಭಿಮಾನ, ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬಿಜೆಪಿ ಸ್ನೇಹಿತರು ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಿದಾಗ ನೀವೆಲ್ಲ ಮಾಡಿದ ಪೂಜೆ, ಪ್ರಾರ್ಥನೆ, ಹೋರಾಟದ ಪುಣ್ಯ ಫಲದಿಂದ ನಾನು ಇವತ್ತು ಮತ್ತೆ ನಿಮ್ಮ ಮುಂದೆ ಬಂದಿದ್ದೇನೆ. ಹೊಸಕೋಟೆ ರಣರಂಗದಲ್ಲಿ ಬಂದು ನಿಂತಿದ್ದೇನೆ. ನಾನು 7 ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದೇನೆ. ನನಗೂ ಸಣ್ಣ-ಪುಟ್ಟ ಆಸ್ತಿ ಇರಬಹುದು. ಆದರೆ ನಾನು ಎಂಟಿಬಿಯಷ್ಟು ಶ್ರೀಮಂತನಲ್ಲ. ಆದರೆ ನೀವು ತೋರಿದ ಪ್ರೀತಿ ಅಭಿಮಾನ ನೋಡಿ ನಿಮ್ಮ ಋಣ ಹೇಗೆ ತೀರಿಸಬೇಕು ಅಂತಾ ಗೊತ್ತಾಗುತ್ತಿಲ್ಲ. ನಿಮ್ಮಲ್ಲಿ ಅನೇಕ ಜನ ಮನೆಯಲ್ಲೇ ಕೂತು, ಅದರಲ್ಲೂ ಹೆಣ್ಣುಮಕ್ಕಳು, ಹಿರಿಯರು ಡಿಕೆ ಶಿವಕುಮಾರ್ ಗೆ ಆದ ಅನ್ಯಾಯ ನಮ್ಮ ಕುಟುಂಬದವರಿಗೆ ಆಗಿರುವಂಥದ್ದು ಎಂಬ ರೀತಿ ನೊಂದಿದ್ದೀರಿ. ನೊಂದು ನೀವೆಲ್ಲ ಪ್ರಾರ್ಥನೆ ಮಾಡಿದ್ದೀರಲ್ಲಾ, ನಿಮ್ಮ ಆ ಋಣ ತೀರಿಸಲು ನನಗೆ ಶಕ್ತಿ ಕೊಡಪ್ಪಾ ಅಂತ ಹೋದ ದೇವಸ್ಥಾನಗಳಲ್ಲೆಲ್ಲಾ ದೇವರನ್ನು ಪ್ರಾರ್ಥಿಸುತ್ತಿದ್ದೇನೆ' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News