ಬಂಡಾಯ ಲೇಖಕ ಚನ್ನಣ್ಣ ವಾಲೀಕಾರ್ ನಿಧನ: ಹುಟ್ಟೂರಿನಲ್ಲಿ ಅಂತ್ಯಕ್ರಿಯೆ
ಕಲಬುರ್ಗಿ, ನ. 25: ಹಿರಿಯ ಸಾಹಿತಿ, ಬಂಡಾಯ ಲೇಖಕ, ಶೋಷಿತ ಸಮುದಾಯದ ಧ್ವನಿ ಚನ್ನಣ್ಣ ವಾಲೀಕಾರ್(78) ಅವರು ರವಿವಾರ ನಿಧನರಾಗಿದ್ದು, ಜಿಲ್ಲೆಯ ಚಿತ್ತಾಪುರ ತಾಲೂಕಿನ ಅವರ ಹುಟ್ಟೂರು ಶಂಕರವಾಡಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಸಂಖ್ಯೆಯ ಅಭಿಮಾನಿ ಬಂಧು- ಮಿತ್ರರನ್ನು ಶ್ರೀಯುತರು ಅಗಲಿದ್ದಾರೆ. ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚನ್ನಣ್ಣ ವಾಲೀಕಾರ್ ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಅವರ ದೇಹ ಸ್ಪಂದಿಸದ ಕಾರಣ ನಿನ್ನೆ ರಾತ್ರಿ 10ಗಂಟೆ ಸುಮಾರಿಗೆ ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಂಕರವಾಡಿ ಗ್ರಾಮದಲ್ಲಿ ಸಾಬಮ್ಮ ಮತ್ತು ಧೂಳಪ್ಪ ದಂಪತಿ ಪುತ್ರರಾಗಿ 1943ರ ಎಪ್ರಿಲ್ 6ರಂದು ಜನಿಸಿದ ಚನ್ನಣ್ಣ ವಾಲೀಕಾರ್ ಅವರು, ಕಲಬುರ್ಗಿ ಶರಣಬಸವೇಶ್ವರ ಕಲಾ ಕಾಲೇಜಿನಲ್ಲಿ ಬಿಎ ಪದವಿ, ಕರ್ನಾಟಕ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ಪ್ರೌಢಶಾಲೆ ಶಿಕ್ಷಕರಾಗಿ, ಕಾಲೇಜು ಉಪನ್ಯಾಸಕರಾಗಿ, ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ, ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ. ಮುಂಬೈ, ಹೈದರಾಬಾದ್, ಹಂಪಿ, ಬೆಂಗಳೂರು, ಧಾರವಾಡ, ಮೈಸೂರು, ಶಿವಮೊಗ್ಗದಲ್ಲಿ ವಿವಿಗಳಲ್ಲಿ ಗ್ರಂಥಾಲಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. ಚೆನ್ನಣ್ಣ ವಾಲೀಕಾರ್ ಅವರು ಬರೆದಿರುವ ‘ನೀ ಹೋದ ಮರುದಿನ ಮೊದಲ್ಹಂಗೆ ನಮ್ ಬದುಕು ಆಗ್ಯಾದೋ ಬಾಬಾ ಸಾಹೇಬ’ ಎಂಬ ಅಂಬೇಡ್ಕರ್ ಅವರ ಕುರಿತು ಹೋರಾಟದ ಹಾಡು ಅತ್ಯಂತ ಹೆಚ್ಚು ಜನಪ್ರಿಯವಾಗಿತ್ತು. ಕಥೆ, ಕವನ, ನಾಟಕ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಚನ್ನಣ್ಣ, ಬಂಡಾಯ ಸಾಹಿತ್ಯದಲ್ಲಿ ಅಗ್ರಸ್ಥಾನ ಗಳಿಸಿದ್ದರು.
‘ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ’ ಎಂದು ಪ್ರಶ್ನಿಸುತ್ತಲೇ ಶೋಷತರ ಧ್ವನಿಯಾದ ಚನ್ನಣ್ಣ ವಾಲೀಕಾರ್ ಅವರು, ಸಮಾಜದಲ್ಲಿ ಅನ್ಯಾಯ, ಅಕ್ರಮ ಕಂಡರೆ ತಕ್ಷಣ ಪ್ರತಿಭಟಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಜನಪರ ಚಳವಳಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಿದ್ದರು.
ಸೋಮವಾರ ಬೆಳಗ್ಗೆ 10ಕ್ಕೆ ಕಲಬುರ್ಗಿಯ ಹಿಂದಿ ಪ್ರಚಾರ ಸಭಾದಲ್ಲಿ ಚನ್ನಣ್ಣ ವಾಲೀಕಾರ್ ಅವರ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಈ ವೇಳೆ ಹಿರಿಯ ಸಾಹಿತಿಗಳಾದ ಡಾ.ಗೀತಾ ನಾಗಭೂಷಣ, ರಂಜಾನ್ ದರ್ಗಾ, ಡಾ.ಮೀನಾಕ್ಷಿ ಬಾಳಿ, ಕೆ.ನೀಲಾ, ಡಿ.ಜಿ.ಸಾಗರ, ಆರ್.ಕೆ.ಹುಡುಗಿ, ಪ್ರೊ.ಎಚ್.ಡಿ. ಪೋತೆ ಸೇರಿದಂತೆ ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.
ಆ ಬಳಿಕ ಚನ್ನಣ್ಣ ವಾಲೀಕಾರ್ ಅವರ ಮೃತದೇಹವನ್ನು ಅವರ ಹುಟ್ಟೂರಾದ ಚಿತ್ತಾಪುರ ತಾಲೂಕಿನ ಶಂಕರವಾಡಿ ಗ್ರಾಮದಲ್ಲಿ ಅಭಿಮಾನಿಗಳ ಮತ್ತು ಬಂಧು- ಮಿತ್ರರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.