ಆರ್ಥಿಕ ಸಂಕಷ್ಟ: ಕಾಫಿ ಡೇ ಸಿದ್ದಾರ್ಥ್ ಮಾಲಕತ್ವದ ಡಿಎಎಫ್‍ಎಫ್ ಕಂಪೆನಿಗೆ ಬೀಗ !
ಚಿಕ್ಕಮಗಳೂರು, ನ.25: ಉದ್ಯಮಿ ಸಿದ್ದಾರ್ಥ್ ಹೆಗ್ಡೆ ಮಾಲಕತ್ವದ ಪೀಠೋಪಕರಣಗಳ ಕಂಪೆನಿಯೊಂದಕ್ಕೆ ಆಡಳಿತ ಮಂಡಳಿ ಸೋಮವಾರ ಬೀಗ ಜಡಿದಿದ್ದು, ಕಂಪೆನಿಯ ನೂರಾರು ಉದ್ಯೋಗಿಗಳಿಗೆ ಯಾವುದೇ ಮುನ್ಸೂಚನೆ ನೀಡದೇ ದಿಢೀರ್ ನೋಟಿಸ್ ನೀಡುವ ಮೂಲಕ ಕೆಲಸದಿಂದ ತೆಗೆದು ಹಾಕಿದ ಘಟನೆ ನಡೆದಿದೆ.
ಇತ್ತೀಚೆಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಬಿಸಿ ಕಂಪೆನಿ ಮಾಲಕ ಜಿ.ವಿ.ಸಿದ್ದಾರ್ಥ್ ಹೆಗ್ಡೆ ಮಾಲಕತ್ವದ ಡಾರ್ಕ್ ಫಾರೆಸ್ಟ್ ಫರ್ನಿಚರ್ ಕಂಪೆನಿ ಪ್ರೈ. ಲಿಮಿಟೆಡ್‍ಗೆ ಆಡಳಿತ ಮಂಡಳಿಯು ಸೋಮವಾರ ಬೀಗ ಹಾಕಿದೆ. ಚಿಕ್ಕಮಗಳೂರು ನಗರದ ಎಬಿಸಿ ಕಂಪೆನಿಯ ಕಚೇರಿ ಆವರಣದಲ್ಲೇ ಈ ಕಂಪೆನಿಯ ಕಚೇರಿ ಇದ್ದು, ಬೀಗ ಹಾಕಿದ್ದರಿಂದ ಕೆಲಸ ಕಳೆದುಕೊಂಡ ನೂರಾರು ಉದ್ಯೋಗಿಗಳು ಕಂಗಾಲಾಗಿ ಸೋಮವಾರ ಎಬಿಸಿ ಕಚೇರಿ ಆವರಣದ ಗೇಟ್ ಮುಂಭಾಗದಲ್ಲಿ ಜಮಾಯಿಸಿದ್ದ ದೃಶ್ಯಗಳು ಕಂಡು ಬಂದವು.
ಕಂಪೆನಿಯು ಬಾಗಿಲು ಮುಚ್ಚುವ ಬಗ್ಗೆ ಉದ್ಯೋಗಿಗಳಿಗೆ ಈ ಹಿಂದೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ ಎಂದು ತಿಳಿದು ಬಂದಿದ್ದು, ಸೋಮವಾರ ಬೆಳಗ್ಗೆ ಕೆಲಸಕ್ಕೆ ಬಂದಿದ್ದ ಕಂಪೆನಿಯ ಉದ್ಯೋಗಿಗಳಿಗೆ ಸ್ಥಳದಲ್ಲೇ ದಿಢೀರ್ ನೋಟಿಸ್ ನೀಡಿ, ಇಂದಿನಿಂದ ಕೆಲಸಕ್ಕೆ ಬರುವುದು ಬೇಡ ಎಂದು ಕಂಪೆನಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಕಂಪೆನಿಯು ಯಾವುದೇ ಮನ್ಸೂಚನೆ ನೀಡದೇ ದಿಢೀರನೆ ನೋಟಿಸ್ ನೀಡಿ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿರುವ ಕ್ರಮದಿಂದ ಕಂಗಾಲಾಗಿದ್ದ ಸಿಬ್ಬಂದಿ ಸೋಮವಾರ ನಗರದ ಚಿಕ್ಕಮಗಳೂರು-ಮೂಡಿಗೆರೆ ರಸ್ತೆಯಲ್ಲಿರುವ ಎಬಿಸಿ ಕಂಪಿನಿಯ ಕಚೇರಿ ಆವರಣದ ಎದುರಿನ ಗೇಟ್‍ನ ಮುಂಭಾಗದಲ್ಲಿ ಜಮಾಯಿಸಿದ್ದ ದೃಶ್ಯಗಳು ಕಂಡುಬಂದವು.
ನ.25, 2019ರಿಂದ ಅನ್ವಯವಾಗುವಂತೆ ಡಾರ್ಕ್ ಫಾರೆಸ್ಟ್ ಫರ್ನಿಚರ್ ಕಂಪೆನಿ ಪ್ರೈವೇಟ್ ಲಿಮಿಟೆಡ್ ಅನ್ನು ಮುಚ್ಚಲಾಗಿದ್ದು, ಎಲ್ಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಉದ್ಯೋಗಿಗಳಿಗೆ ನೀಡಲಾಗಿರುವ ನೋಟಿಸ್‍ನಲ್ಲಿ ತಿಳಿಸಲಾಗಿದ್ದು, ಕಂಪೆನಿಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವುದರಿಂದ ಕೆಲಸ ಕಳೆದುಕೊಂಡಿರುವ ಉದ್ಯೋಗಿಗಳಿಗೆ ಪರಿಹಾರ ನೀಡಲು ಸದ್ಯ ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಶೀಘ್ರ ಕ್ರಮಕೈಗೊಳ್ಳಲಾಗುವುದೆಂದೂ ನೋಟಿಸ್‍ನಲ್ಲಿ ತಿಳಿಸಲಾಗಿದೆ.
ಕೆಲಸ ಕಳೆದುಕೊಂಡಿದ್ದರಿಂದ ಆತಂಕಕ್ಕೊಳಗಾದ ನೌಕರರನು ಕಚೇರಿ ಆವರಣದಲ್ಲಿ ಜಮಾಯಿಸಿದ್ದರಿಂದ ಗಲಾಟೆ ಸಂಭವಿಸುವ ಮುನ್ನೆಚ್ಚರಿಕೆಯಿಂದಾಗಿ ನಗರದ ಎಬಿಸಿ ಕಚೇರಿ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಕಚೇರಿ ಗೇಟ್ ಎದುರು ಜಮಾಯಿಸಿದ್ದ ಕೆಲಸ ಕಳೆದುಕೊಂಡ ನೌಕರರು ಕಂಪೆನಿಯ ಅಧಿಕಾರಿಗಳ ಬಳಿ ಮಾತನಾಡಲು ಮುಂದಾದರೂ ಪೊಲೀಸರು ಕಚೇರಿ ಗೇಟಿನೊಳಗೆ ಬಿಡಲು ನಿರಾಕರಿಸುತ್ತಿದ್ದ ದೃಶ್ಯಗಳೂ ಕಂಡು ಬಂದವು. ಇದರಿಂದ ಕುಪಿತರಾದ ನೌಕರರು ಕಂಪೆನಿ ವ್ಯವಸ್ಥಾಪಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ದೃಶ್ಯಗಳೂ ಕಂಡು ಬಂದವು.
ಕಂಪೆನಿಯು ಉದ್ಯೋಗಿಗಳಿಗೆ ನೀಡಿರುವ ದಿಢೀರ್ ನೋಟಿಸ್‍ನಲ್ಲಿ 'ಸಿದ್ದಾರ್ಥ್ ಹೆಗ್ಡೆ ನಿಧನದ ಬಳಿಕ ಕಂಪೆನಿ ಭಾರೀ ಅರ್ಥಿಕ ಸಂಕಷ್ಟದಲ್ಲಿದೆ. ಕಂಪೆನಿಯ ಉತ್ಪನ್ನಗಳಿಗೂ ಬೇಡಿಕೆ, ಆರ್ಡರ್ ಕುಸಿದಿರುವುದರಿಂದ ಕಂಪೆನಿಯನ್ನು ಇನ್ನು ಮುಂದಕ್ಕೆ ಮುನ್ನಡೆಸಲು ಸಾಧ್ಯವಿಲ್ಲದಂತಾಗಿದೆ. ಈ ಕಾರಣಕ್ಕೆ ಕಂಪೆನಿಯನ್ನು ಮುಚ್ಚಲಾಗುತ್ತಿದೆ. ಚಿಕ್ಕಮಗಳೂರು ನಗರದಲ್ಲಿರುವ ಪೀಠೋಪಕರಣಗಳ ಉತ್ಪಾದನಾ ಘಟಕವನ್ನೂ ಮುಚ್ಚಲಾಗುತ್ತಿದ್ದು, ಎಲ್ಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ' ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.