ನನಗೆ 120 ಕೋಟಿ ರೂ...: ಅನರ್ಹ ಶಾಸಕ ಎಂಟಿಬಿ ವಿರುದ್ಧ ಶರತ್ ಬಚ್ಚೇಗೌಡ ವಾಗ್ದಾಳಿ

Update: 2019-11-25 14:03 GMT

ಬೆಂಗಳೂರು, ನ.25: ನನ್ನ ಸ್ವಾಭಿಮಾನವನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಬೇರೆ ಜನಪ್ರತಿನಿಧಿಗಳಿಗೆ ನಿಗದಿ ಮಾಡಿದಂತೆ ನನಗೆ ದರ ನಿಗದಿ ಮಾಡಿದರೆ, ನಿಮ್ಮ ಆಮಿಷಗಳಿಗೆ ನಾನು ಬಲಿಯಾಗುವುದಿಲ್ಲ ಎಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಾಗ್ದಾಳಿ ನಡೆಸಿದರು.

ಸೋಮವಾರ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬೈಲನರಸಾಪುರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ಮಾತನಾಡಿದ ಅವರು, ರಾಜಕೀಯದಲ್ಲಿರುವ ಏಜೆಂಟ್‌ಗಳು ಗ್ರಾಮ ಪಂಚಾಯತ್ ಸದಸ್ಯನಿಗೆ 2 ಲಕ್ಷ ರೂ., ತಾಲೂಕು ಮಟ್ಟದ ಮುಖಂಡರಿಗೆ 5-6 ಲಕ್ಷ ರೂ., ಜಿಲ್ಲಾ ಪಂಚಾಯತ್ ಸದಸ್ಯರಿಗೆ 75 ಲಕ್ಷ ರೂ. ಎಂದು ದರ ನಿಗದಿ ಮಾಡಲಾಗುತ್ತಿದೆಯಂತೆ ಎಂದರು.

ಅದೇ ರೀತಿ ನನಗೂ 120 ಕೋಟಿ ರೂ.ಗಳನ್ನು ನಿಗದಿ ಮಾಡಿದ್ದಾರಂತೆ, ಎಂಟಿಬಿ ನಾಗರಾಜ್ ಅವರೇ ನೀವು 120 ಕೋಟಿ ರೂ.ಅಲ್ಲ, ನಿಮ್ಮ ಇಡೀ ಆಸ್ತಿ ಕೊಟ್ಟರೂ ನಾನು ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ. ನಾನು ಮಾರಾಟಕ್ಕಿಲ್ಲ, ಸ್ವಾಭಿಮಾನಕ್ಕಾಗಿ ಹಾಗೂ ಕ್ಷೇತ್ರದ ಜನರೊಂದಿಗೆ ನಮಗಿರುವ ಬಾಂಧವ್ಯಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಅವರು ಹೇಳಿದರು.

ಎಂಟಿಬಿ ನಾಗರಾಜ್ ರಿಯಲ್ ಎಸ್ಟೇಟ್ ಉದ್ಯಮದ ಹಿನ್ನೆಲೆಯಿಂದ ಬಂದವರು. ಅವರ ವ್ಯವಹಾರದಲ್ಲಿ ಭೂಮಿಗೆ ಬೆಲೆ ಕಟ್ಟಲಾಗುತ್ತದೆ. ಆದರೆ, ನಾವು ರೈತರು. ಭೂಮಿಗೆ ತಾಯಿಯ ಸ್ಥಾನದಲ್ಲಿಟ್ಟು ಪೂಜೆ ಮಾಡುತ್ತೇವೆ. ರಿಯಲ್ ಎಸ್ಟೇಟ್‌ನಲ್ಲಿ ಏಜೆಂಟ್‌ಗಳಿರುವಂತೆ, ಈಗ ರಾಜಕೀಯದಲ್ಲಿಯೂ ಏಜೆಂಟ್‌ಗಳು ಬಂದಿದ್ದಾರೆ. ಅವರೇ ಈ ದರಗಳನ್ನು ನಿಗದಿ ಮಾಡುವವರು ಎಂದು ಶರತ್ ಬಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಹೊಸಕೋಟೆ ತಾಲೂಕಿನ ಇತಿಹಾಸದಲ್ಲೆ ಮೊದಲನೆ ಬಾರಿ ಉಪ ಚುನಾವಣೆ ಎದುರಾಗಿದೆ. ಎಂಟಿಬಿ ನಾಗರಾಜ್ ಗೆ ಐಟಿ ಹಾಗೂ ಈ.ಡಿ. ಇಲಾಖೆಯ ಭಯ ಕಾಡುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ತಮ್ಮ ಸಂಪತ್ತನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಈಗ ಉಪ ಚುನಾವಣೆ ಎದುರಾಗುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News