ಅನರ್ಹ ಶಾಸಕರ ವಿರುದ್ಧ ದೇಶದ್ರೋಹದ ದೂರು: ಎನ್‌ಐಎ ಕೋರ್ಟ್ ನಲ್ಲಿ ವಕೀಲ ಬಾಲನ್ ಮಾಡಿದ ಗಂಭೀರ ಆರೋಪಗಳಿವು...

Update: 2019-11-25 15:09 GMT

ಬೆಂಗಳೂರು, ನ.25: ಜೆಡಿಎಸ್, ಕಾಂಗ್ರೆಸ್ ಪಕ್ಷ ತೊರೆದು ಅನರ್ಹರಾಗಿರುವ 17 ಮಂದಿ ಹಾಗೂ ಇತರರ ವಿರುದ್ಧ ದೇಶದ್ರೋಹ ಆರೋಪದಡಿ ದಾಖಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಎನ್‌ಐಎ(ರಾಷ್ಟ್ರೀಯ ತನಿಖಾ ದಳ) ವಿಶೇಷ ಕೋರ್ಟ್ ವಿಚಾರಣೆಯನ್ನು ನ.26ಕ್ಕೆ ಮುಂದೂಡಿದೆ.

ಹಿರಿಯ ವಕೀಲ ಬಾಲನ್ ಅವರು ಅನರ್ಹ ಶಾಸಕರ ವಿರುದ್ಧ ಸಲ್ಲಿಸಿರುವ ಅರ್ಜಿ ವಿಚಾರಣೆ 52ನೆ ಎನ್‌ಐಎ ಕೋರ್ಟ್‌ನಲ್ಲಿ ನಡೆಯಿತು. 'ಅನರ್ಹ ಶಾಸಕರು ಅಕ್ರಮ ಹಣ ಪಡೆದು ಬಿಜೆಪಿ ಸೇರಿದ್ದಾರೆ. ಆಪರೇಷನ್ ಕಮಲಕ್ಕೆ ಬಿಜೆಪಿ ಅಕ್ರಮ ಹಣ ಬಳಕೆ ಮಾಡಿದ್ದು, ದುಡ್ಡಿನ ಮೂಲ ಯಾವುದು ಎಂದು ತಿಳಿಯಬೇಕಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಅನರ್ಹರಿಂದಾಗಿಯೇ ಬಿಜೆಪಿ ಸರಕಾರ ರಚನೆ ಮಾಡಲು ಸಾಧ್ಯವಾಗಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಅನರ್ಹ ಶಾಸಕರನ್ನು ಮಂತ್ರಿ ಮಾಡುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಆಪರೇಷನ್ ಕಮಲಕ್ಕೆ ಸಾವಿರ ಕೋಟಿ ರೂ. ಅಕ್ರಮ ಹಣ ಬಳಕೆಯಾಗಿದೆ. ರಾಜಕೀಯ ಪಕ್ಷಗಳಿಗೆ ಭಯೋತ್ಪಾದಕ ಶಕ್ತಿಗಳಿಂದ ಹಣ ಬರುತ್ತಿದೆ ಎಂಬ ಆರೋಪವಿದೆ. ಈ ಹಣದ ಮೂಲದ ಬಗ್ಗೆ ತನಿಖೆ ನಡೆಯಬೇಕೆಂದು ಬಾಲನ್ ಆರೋಪಿಸಿದ್ದಾರೆ.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಮಂಗಳವಾರ ಮಧ್ಯಾಹ್ನ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News