ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ

Update: 2019-11-25 17:08 GMT

ಬೆಂಗಳೂರು, ನ.25: ರಾಜ್ಯದ ಎಲ್ಲ ಖಾಸಗಿ ಶಾಲೆಗಳು ಶುಲ್ಕದ ಮಾಹಿತಿಯನ್ನು ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ರಾಜ್ಯದ ಕೆಲವು ಶಾಸಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಲಕ್ಷಾಂತರ ರೂ.ಗಳ ಶುಲ್ಕ ಪಡೆಯುತ್ತಿರುವ ಸಂಬಂಧ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಶುಲ್ಕದ ಮಾಹಿತಿ ಸೂಚನಾ ಫಲಕದಲ್ಲಿ ಪ್ರಕಟಿಸಲು ಸೂಚಿಸಿದೆ.

ರಾಜ್ಯದಲ್ಲಿ 19,645 ಖಾಸಗಿ ಶಾಲೆಗಳು ಹಾಗೂ 3,194 ಪದವಿ ಪೂರ್ವ ಕಾಲೇಜುಗಳಿವೆ. ಇವುಗಳಲ್ಲಿ 50 ಲಕ್ಷಕ್ಕೂ ಅಧಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲ ಶಾಲೆ-ಕಾಲೇಜುಗಳಲ್ಲಿ ಡಿಸೆಂಬರ್ 31 ರೊಳಗೆ ಶುಲ್ಕದ ಮಾಹಿತಿ ಪ್ರಕಟಿಸಬೇಕು ಹಾಗೂ ವೆಬ್‌ಸೈಟ್‌ನಲ್ಲಿ ಮಾಹಿತಿ ಅಳವಡಿಸಬೇಕು ಎಂದು ಇಲಾಖೆ ಹೇಳಿದೆ.

ವೆಬ್‌ಸೈಟ್‌ನಲ್ಲಿ ಪ್ರಕಟ: ಎಲ್ಲ ಖಾಸಗಿ ಶಾಲಾ-ಕಾಲೇಜುಗಳು ಎಸ್‌ಎಟಿಎಸ್‌ನಲ್ಲಿ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಬಳಸಿಕೊಂಡು ಶಾಲೆಗಾಗಿ ಸಿದ್ಧಪಡಿಸಿರುವ ಡ್ಯಾಶ್ ಬೋರ್ಡ್‌ನಲ್ಲಿ 2020-21 ನೆ ಸಾಲಿನಲ್ಲಿ ವಿಧಿಸುವ ಶುಲ್ಕದ ಮಾಹಿತಿ ಪ್ರಕಟಿಸಬೇಕು ಎಂದು ತಿಳಿಸಲಾಗಿದೆ.

ಶುಲ್ಕ ವಿವರ: ಪೂರ್ವ ಪ್ರಾಥಮಿಕದಿಂದ ಪಿಯುವರೆಗೆ ಬೋಧನಾ ಶುಲ್ಕ, ಅವಧಿ ಶುಲ್ಕ, ವಿಶೇಷ ಅಭಿವೃದ್ಧಿ ಶುಲ್ಕ ಸೇರಿದಂತೆ ಒಟ್ಟಾರೆ ಶುಲ್ಕದ ಮಾಹಿತಿಯನ್ನು ಪ್ರಕಟಿಸಬೇಕು. ಕಳೆದ ಮೂರು ವರ್ಷದಲಿ ಪಬ್ಲಿಕ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದಿರುವ ಫಲಿತಾಂಶವನ್ನು ಪ್ರಕಟಿಸಬೇಕೆಂದು ಸೂಚನೆಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News