ಸಿದ್ದರಾಮಯ್ಯ, ಬಿಎಸ್‌ವೈ ಇಬ್ಬರೂ ಬೆಂಬಲ ಕೋರಿದ್ದಾರೆ: ಜಿ.ಟಿ ದೇವೇಗೌಡ
ಮೈಸೂರು,ನ.25: ಹುಣಸೂರು ಉಪ ಚುನಾವಣೆ ಹಿನ್ನೆಲೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ ಇಬ್ಬರೂ ನನ್ನ ಜೊತೆ ಮಾತನಾಡಿದ್ದಾರೆ. ಇಬ್ಬರು ನಾಯಕರೂ ತಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ಕೋರಿದ್ದಾರೆ. ಈ ಚುನಾವಣೆಯಲ್ಲಿ ನಾನು ತಟಸ್ಥವಾಗಿ ಉಳಿಯಲು ನಿರ್ಧರಿಸಿದ್ದೇನೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಸ್ಪಷ್ಟಪಡಿಸಿದರು.
ಮಾಜಿ ಸಚಿವ ಜಿ.ಟಿ ದೇವೇಗೌಡರ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಸೋಮವಾರ ಜಿ.ಟಿ.ದೇವೇಗೌಡರ ನಿವಾಸಕ್ಕೆ ಸಚಿವ ಶ್ರೀರಾಮುಲು ಭೇಟಿ ನೀಡಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ನಂತರ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಜಿ.ಟಿ.ದೇವೇಗೌಡ, ಶ್ರೀರಾಮುಲು ಉತ್ತಮ ವ್ಯಕ್ತಿತ್ವದ ರಾಜಕಾರಣಿ. ಇಂದು ನನಗೆ ಶುಭಾಶಯ ಹೇಳಲು ಬಂದಿದ್ದಾರೆ. ಶ್ರೀರಾಮುಲು ಅವರಿಗೆ ಹಿಂದೆಯೇ ಡಿಸಿಎಂ ಹುದ್ದೆ ನಿರ್ಧಾರ ಆಗಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅದು ಈಡೇರಿಲ್ಲ. ಆದರೆ ಕೆಲವೊಮ್ಮೆ ಕೆಲ ಸನ್ನಿವೇಶಗಳಲ್ಲಿ ವ್ಯತ್ಯಾಸ ಆಗುತ್ತೆ. ಆದರೂ ಶ್ರೀರಾಮುಲು ಬೇಸರ, ಸಿಟ್ಟು ಮಾಡಿಕೊಳ್ಳದೆ ಪಕ್ಷ ನಿಷ್ಠೆಯಿಂದ, ಪಕ್ಷದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಮುಂದೆ ಶ್ರೀರಾಮುಲು ಅವರಿಗೆ ಒಳ್ಳೆಯದೇ ಆಗುತ್ತೆ ಎಂದು ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಶ್ರೀರಾಮುಲು ಅವರಿಗೆ ಧನ್ಯವಾದ ತಿಳಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ ಇಬ್ಬರೂ ನನ್ನ ಜೊತೆ ಮಾತನಾಡಿದ್ದಾರೆ. ಇಬ್ಬರೂ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ಕೋರಿದ್ದಾರೆ. ಈ ಚುನಾವಣೆಯಲ್ಲಿ ನಾನು ತಟಸ್ಥವಾಗಿ ಉಳಿಯಲು ನಿರ್ಧರಿಸಿದ್ದೇನೆ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರಲ್ಲ ಅನ್ನೋದು ಇತ್ತೀಚಿನ ಬೆಳವಣಿಗೆಗಳೆ ಸಾಕ್ಷಿ. ಹುಣಸೂರಿನಲ್ಲಿ ನನ್ನ ಬೆಂಬಲಿಗರು ಸ್ಥಳೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಹುಣಸೂರು ಉಪಚುನಾವಣೆಯಲ್ಲಿ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಈಗ ಹೇಳಲು ಆಗಲ್ಲ. ಕಳೆದ ಬಾರಿ ವಿಶ್ವನಾಥ್ 8 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಅದೇ ನಂಬಿಕೆ ಮೇಲೆ ಜೆಡಿಎಸ್ ಗೆಲ್ಲುತ್ತೆ ಅಂತಾ ಉಪಚುನಾವಣೆ ಎದುರಿಸುತ್ತಿದ್ದಾರೆ. ಜೆಡಿಎಸ್ ನಲ್ಲಿದ್ದರೂ ನನ್ನ ತಟ್ಟಸ್ಥ ಧೋರಣೆಯಿಂದ ಜೆಡಿಎಸ್ ಗೆ ತೊಂದರೆ ಆಗುತ್ತೋ ಇಲ್ಲವೊ ಹೇಳಲು ಆಗುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಜೆಡಿಎಸ್ ಬಗ್ಗೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ಜಿ.ಟಿ ದೇವೇಗೌಡರು, ಜೆಡಿಎಸ್ ಪಕ್ಷ ನನಗೆ ಎಂದೂ ಕೂಡ ನಾಯಕತ್ವ ಕೊಟ್ಟಿಲ್ಲ. ನಾನೇ ನಾಯಕತ್ವ ತೆಗದುಕೊಂಡು ಪಕ್ಷವನ್ನು ಬೆಳೆಸಲು ಮುಂದಾದೆ. ಜೆಡಿಎಸ್ ರಾಜ್ಯದಲ್ಲಿ ಇದೇ ರೀತಿ ಮಲಗಿದ್ದರೆ ಆಗಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷ ಬಲಪಡಿಸಲು ಪ್ರಾರಂಭಿಸಿದೆ. ಎಲ್ಲರನ್ನು ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕರೆತಂದೆ. ಅದರೆ ನನ್ನನ್ನ ನಾಯಕನನ್ನಾಗಿ ನೋಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಸಾಕಷ್ಟು ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಜಿ.ಟಿ.ದೇವೆಗೌಡರ ಆಸ್ತಿ ಎಷ್ಟು, ಹತ್ತು ವರ್ಷದ ಹಿಂದೆ ರಾಜಕೀಯಕ್ಕೆ ಬಂದವರ ಆಸ್ತಿ ಎಷ್ಟಿದೆ ಎಂಬುದನ್ನ ಯಾರು ನೋಡುವುದಿಲ್ಲ. ಈಗಿನ ರಾಜಕೀಯ ಯಾರಿಗೂ ಬೇಡ. ಕಳೆದ ಚುನಾವಣೆ ಸಂದರ್ಭದಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ನವರು ಯಾವ ರೀತಿ ಕಚ್ಚಾಡಿದರು. ಫಲಿತಾಂಶ ಬಂದ ನಂತರ ಲವರ್ ತರ ತಬ್ಬಿಕೊಂಡರು. ಈಗ ಯಡಿಯೂರಪ್ಪರ ಸರ್ಕಾರ ಬೀಳಿಸಲ್ಲ ಅಂತ ಕುಮಾರಸ್ವಾಮಿ ಹೇಳುತ್ತಾರೆ. ಅದಕ್ಕೆ ಯಡಿಯೂರಪ್ಪ ಧನ್ಯವಾದ ಅಂತಾರೆ. ಈ ರೀತಿ ಪರಿಸ್ಥಿತಿ ಇರುವಾಗ ಹೋರಾಟ ಮಾಡಿದವರ ಕತೆ ಏನು ? ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ತತ್ವ ಸಿದ್ದಾಂತ ಇಲ್ಲ. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಜಿ.ಟಿ.ದೇವೆಗೌಡ ಅವರು ಬೇಸರ ವ್ಯಕ್ತಪಡಿಸಿದರು.