ಕೆ.ಆರ್.ಪೇಟೆಯನ್ನು ಶಿಕಾರಿಪುರದಂತೆ ಮಾದರಿ ಕ್ಷೇತ್ರ ಮಾಡುತ್ತೇನೆ: ಸಿಎಂ ಯಡಿಯೂರಪ್ಪ ಭರವಸೆ

Update: 2019-11-25 17:58 GMT

ಮಂಡ್ಯ, ನ.25: ನಾರಾಯಣಗೌಡರನ್ನು ಗೆಲ್ಲಿಸಿಕೊಡಿ. ಶಿಕಾರಿಪುರದಂತೆ ಈ ಕ್ಷೇತ್ರವನ್ನೂ ಮಾದರಿ ಕ್ಷೇತ್ರವಾಗಿ ಮಾಡಿಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆ.ಆರ್.ಪೇಟೆ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ ಸೋಮವಾರ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಮತ್ತು ಹುಟ್ಟೂರು ಬೂಕನಕೆರೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನಿರೀಕ್ಷೆಗೂ ಮೀರಿ ನಾರಾಯಣಗೌಡ 20-25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದರು.
ಇವಾಗ ಯಾವುದೇ ಕೆಲಸದ ಪಟ್ಟಿ ಮಾಡಿಕೊಡುವ ಅವಶ್ಯಕತೆ ಇಲ್ಲ. ಮುಂದೆ ನೀವೇ ಮಂತ್ರಿ ಆಗಿರ್ತೀರ. ನೀವೇ ಮುಂದೆ ನಿಂತು ಎಲ್ಲವನ್ನೂ ಮಾಡಿ ಎಂದು ಅವರು ವೇದಿಕೆಯಲ್ಲಿದ್ದ ಅಭ್ಯರ್ಥಿ ನಾರಾಯಣಗೌಡರಿಗೆ ಮಂತ್ರಿ ಪದವಿ ನೀರುವ ಭರವಸೆ ಇತ್ತರು.

ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲಿ ಅಂತಾ ನಾರಾಯಣಗೌಡ ಬಿಜೆಪಿಗೆ ಬಂದಿದ್ದಾರೆ. ನಾರಾಯಣಗೌಡರ ಗೆಲುವು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ನಾರಾಯಣಗೌಡರ ಜೊತೆ 15 ಜನರೂ ಗೆಲ್ಲುತ್ತಾರೆ ಎಂದು ಅವರು ಹೇಳಿದರು.

ನಾರಾಯಣಗೌಡರ ಮೇಲಿನ ಚಪ್ಪಲಿ ತೂರಾಟ ಪ್ರಸ್ತಾಪಿಸಿದ ಅವರು, ಇಂತಹ ಪುಂಡಾಟಿಕೆಗೆ ಈ ಯಡಿಯೂರಪ್ಪ ಹೆದರುವುದಿಲ್ಲ. ಇಂತಹದ್ದೆಲ್ಲವನ್ನು ಹೇಗೆ ಮಟ್ಟ ಹಾಕಬೇಕೆಂದು ಗೊತ್ತಿದೆ ಎಂದು ಕಿಡಿಕಾರಿದರು.

ಸಿಎಂ ಆಗಿದ್ದಾಗ ಎರಡು 2 ಸಕ್ಕರೆ ಕಾರ್ಖಾನೆ ಆರಂಭ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕೊಟ್ಟಿದ್ದೇನೆ. ಕೆ.ಆರ್.ಪೇಟೆ ಸಮಗ್ರ ಅಭಿವೃದ್ಧಿಗಾಗಿ ನಾರಾಯಣಗೌಡರಿಗೆ ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿದರು.

ಡಿಸಿಎಂ ಡಾ.ಅಶ್ವಥ್ ನಾರಾಯಣ್ ಮಾತನಾಡಿ, ಇದು ಜನರಲ್ ಎಲೆಕ್ಷನ್ ಅಲ್ಲ, ಬೈ ಎಲೆಕ್ಷನ್. ಹೀಗಾಗಿ ಬೇರೆ ಪಕ್ಷಗಳಿಗೆ ಮತ ನೀಡಿದರೆ ಪ್ರಯೋಜನ ಇಲ್ಲ. ಬಿಜೆಪಿಗೆ ಮತ ನೀಡಿದರೆ ಮಾತ್ರ ಉಪಯೋಗ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್, ಶಾಸಕ ಪ್ರೀತಂಗೌಡ, ಮಾಜಿ ಸಚಿವ ಬಿ.ಸೋಮಶೇಖರ್, ಯುವ ಮುಖಂಡ ಬಿ.ವೈ.ವಿಜಯೇಂದ್ರ, ಅಭ್ಯರ್ಥಿ ನಾರಾಯಣಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.

‘ಜೆಡಿಎಸ್ ಅಭ್ಯರ್ಥಿ ಒಬ್ಬ ಕ್ರಿಮಿನಲ್ ಲಾಯರ್. ಕಮಿಷನ್ ಆಸೆಗಾಗಿ ಆಕ್ಸಿಡೆಂಟ್ ಆಗೋದನ್ನೇ ಕಾಯ್ತಾನೆ. ಆಕ್ಸಿಡೆಂಟ್ ಆದ ಸ್ಥಳಕ್ಕೆ ಓಡಿ ಹೋಗ್ತಾನೆ. ನಾನು ಯಾವತ್ತೂ ಕಮಿಷನ್ ಹಿಂದೆ ಬಿದ್ದಿಲ್ಲ. ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೀನಿ. ಪ್ಲೀಸ್, ದಮ್ಮಯ್ಯ ಅಂತೀನಿ. ದಯವಿಟ್ಟು ನನ್ನ ಕೈ ಬಿಡಬೇಡಿ.’ 

- ನಾರಾಯಣಗೌಡ, ಬಿಜೆಪಿ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News