ಜೆಡಿಎಸ್ ಕಷ್ಟದಲ್ಲಿದೆ, ದಯಮಾಡಿ ಉಳಿಸಿಕೊಡಿ ಎಂದ ನಿಖಿಲ್ ಕುಮಾರಸ್ವಾಮಿ
ಮಂಡ್ಯ, ನ.25: ಕುಮಾರಸ್ವಾಮಿ ಅವರಿಗೆ ಕೆಲವರು ಬೆನ್ನಿಗೆ ಚೂರಿ ಹಾಕಿ ಹೋದರು. ನಾರಾಯಣಗೌಡ ಕೂಡ ಆಮಿಷಕ್ಕೆ ಬಲಿಯಾಗಿ ಬಿಜೆಪಿ ಸೇರಿದ್ದಾರೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕೆ.ಆರ್.ಪೇಟೆ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಪರವಾಗಿ ಸೋಮವಾರ ಚುನಾವಣಾ ಪ್ರಚಾರದ ವೇಳೆ ಮಾಕವಳ್ಳಿಯಲ್ಲಿ ಮಾತನಾಡಿದ ಅವರು, ಇಂದು ಜೆಡಿಎಸ್ ಪಕ್ಷ ಕಷ್ಟದಲ್ಲಿದ್ದು, ದಯಮಾಡಿ ಉಳಿಸಿಕೊಡಿ ಎಂದು ಮನವಿ ಮಾಡಿದರು.
ಲೋಕಸಭಾ ಚುನಾವಣೆ ನನಗೆ ಸಾಕಷ್ಟು ಪಾಠ ಕಲಿಸಿದೆ. ದೊಡ್ಡ ಮಟ್ಟದ ಅನುಭವ ಪಡೆದಿದ್ದೇನೆ. ರಾಜಕೀಯದ ಮೊದಲ ಹೆಜ್ಜೆಯಲ್ಲೇ ದೊಡ್ಡ ಅನುಭವ ಆಗಿದೆ. ನಾನು ರಾಜಕೀಯ ಷಡ್ಯಂತ್ರದಿಂದ ಸೋತಿರಬಹುದು. ಆದರೆ, ಜನರು ನನಗೆ ಮೋಸ ಮಾಡಿಲ್ಲ. ನನ್ನ ಮನಸ್ಸಲ್ಲಿ ಸೋಲಿನ ಯಾವುದೇ ನೋವು ಇಲ್ಲ ಎಂದು ಅವರು ಹೇಳಿದರು.
ನಂತರ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯ ಪ್ರಚಾರದಲ್ಲಿ ನಾನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ. ಯಶವಂತಪುರ, ಕಾಮಾಕ್ಷಿಪಾಳ್ಯ, ಕೆ.ಆರ್.ಪುರಂ ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡುತ್ತೇನೆ. ಶರತ್ ಬಚ್ಚೇಗೌಡ ಅವರು ಹೇಳಿದ ದಿನದಂದು ಹೊಸಕೋಟೆಯಲ್ಲೂ ಶರತ್ ಪರ ಪ್ರಚಾರ ಮಾಡುತ್ತೇನೆ ಎಂದರು.
ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಕುಮಾರಸ್ವಾಮಿ ಇಲ್ಲದೆ ಯಾವುದೇ ಸರಕಾರ ನಡೆಯಲ್ಲ, ಕುಮಾರಸ್ವಾಮಿ ಬೇಕೇ ಬೇಕು. ನಿಖಿಲ್ ಭವಿಷ್ಯದ ನಾಯಕರಾಗಲಿದ್ದಾರೆ ಎಂದು ಹೇಳಿದರು.