×
Ad

ಶಾಸಕ ಸ್ಥಾನ ಮಾರಾಟಕ್ಕಿಟ್ಟರೆ ಪ್ರಜಾಪ್ರಭುತ್ವ ಉಳಿಯುವುದೇ?: ದಿನೇಶ್ ಗುಂಡೂರಾವ್

Update: 2019-11-26 19:02 IST

ಬೆಳಗಾವಿ, ನ.26: ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಡೆದ ಘಟನಾವಳಿಗಳು ರಾಜ್ಯ ರಾಜಕಾರಣದ ಇತಿಹಾಸದಲ್ಲಿಯೇ ಕರಾಳ ದಿನಗಳು. ಇಡೀ ದೇಶದಲ್ಲೇ ಇಂತಹ ವ್ಯವಸ್ಥೆ ಬಂದಲ್ಲಿ ರಾಜಕಾರಣ ಮಾಡಲು ಹೇಗೆ ಸಾಧ್ಯ? ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಮಂಗಳವಾರ ಇಲ್ಲಿನ ಅಥಣಿ ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇವಲ ಅಧಿಕಾರಕ್ಕಾಗಿ, ಸಚಿವ ಸ್ಥಾನಕ್ಕಾಗಿ ಶಾಸಕ ಸ್ಥಾನವನ್ನ ವ್ಯಾಪಾರಕ್ಕೆ ಇಟ್ಟರೆ, ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವೇ? ಎಂದು ಆತಂಕ ವ್ಯಕ್ತಪಡಿಸಿದರು.

ಯಾವ ವ್ಯಕ್ತಿಗಳಿಗೆ ಪಕ್ಷದ ಟಿಕೆಟ್ ನೀಡಿ, ನಮ್ಮ ಕಾರ್ಯಕರ್ತರು ಬೆವರು ಸುರಿಸಿ ಪ್ರಚಾರ ಮಾಡಿ, ಆ ಕ್ಷೇತ್ರದಿಂದ ಅವರನ್ನು ಗೆಲ್ಲಿಸಿ ಕಳಿಸಲಾಗಿತ್ತೊ ಅದೇ ವ್ಯಕ್ತಿಗಳು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ತಾಯಿಗೆ ದ್ರೋಹ ಮಾಡುವುದಕ್ಕಿಂತಲೂ ನೀಚ ಕೆಲಸ ಮಾಡಿದ್ದಾರೆ. ಇದರಿಂದ ಖಂಡಿತಾ ಅವರಿಗೆ ಒಳ್ಳೆಯದಾಗುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಕಿಡಿಗಾರಿದರು.

ಭ್ರಷ್ಟಾಚಾರ ಮಾಡಿ 30-40 ಕೋಟಿ ರೂ. ಕೊಟ್ಟು ಶಾಸಕರನ್ನ ಖರೀದಿಸಿದ್ದು, ಸುಪ್ರೀಂಕೋರ್ಟ್ ನ್ಯಾಯಾಧೀಶರು, ಸ್ಪೀಕರ್ ಅವರನ್ನು ಡೀಲ್ ಮಾಡಿಕೊಳ್ಳುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಈ ಹಿಂದಿನ ಆಡಿಯೋದಲ್ಲಿ ಹೇಳಿದ್ದಾರೆ. ರಾಜ್ಯದಲ್ಲಿ ಸರಕಾರ ರಚನೆಗೆ ಬಿಜೆಪಿ ವಾಮ ಮಾರ್ಗ ಹಿಡಿದಿದ್ದು ಇದರಿಂದಲೇ ನಿರೂಪಿತವಾಗಿದೆ ಎಂದು ಅವರು ಹೇಳಿದರು.

15 ಮಂದಿ ಶಾಸಕರು ತಮ್ಮನ್ನು ಮಾರಿಕೊಂಡು, ರಾಜೀನಾಮೆ ನೀಡಿ ಸುಪ್ರೀಂಕೋರ್ಟ್‌ನಿಂದ ಅನರ್ಹರಾಗಿದ್ದಾರೆ. ಅನರ್ಹರು ಎಂದರೆ ಚುನಾವಣೆಗೆ ಸ್ಪರ್ಧಿಸಲು ಯೋಗ್ಯರಲ್ಲ ಎಂದರ್ಥ. ಇಂಥವರು ಇದೀಗ ಜನತಾ ನ್ಯಾಯಾಲಯಕ್ಕೆ ಬಂದಿದ್ದಾರೆ. ಈಗ ನೀವು ಹೇಳಬೇಕು ಅನರ್ಹರು ಶಾಸಕರಾಗಿ ಇರಲು ಯೋಗ್ಯರಲ್ಲದ ಕಾರಣ ಮನೆಗೆ ಕಳಿಸುತ್ತಿದ್ದೇವೆಂದು ಎಂದು ದಿನೇಶ್ ಗುಂಡೂರಾವ್ ಕರೆ ನೀಡಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಸತ್ತು ಹೋಗಿದೆ. ಸಚಿವ ಸಂಪುಟ ಕೆಲಸವೇ ಮಾಡುತ್ತಿಲ್ಲ. ಬರೀ ದುಡ್ಡು ಮಾಡಬೇಕು, ಶಾಸಕರನ್ನು ಖರೀದಿಸಬೇಕು, ಚುನಾವಣೆ ಗೆಲ್ಲಬೇಕು, ಅದಕ್ಕಾಗಿ ದುಡ್ಡು ಬೇಕು, ಅದಕ್ಕಾಗಿ ವರ್ಗಾವಣೆ ದಂಧೆ ಮಾಡಬೇಕು, ಇದನ್ನು ಬಿಟ್ಟರೆ ಬೇರೇನೂ ಕೆಲಸ ಮಾಡುತ್ತಿಲ್ಲ. ಇವರಿಗೆ ದುಡ್ಡಿನ ಅಹಂ ಹೆಚ್ಚಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News