ಸಿದ್ದರಾಮಯ್ಯ ಪಕ್ಷಾಂತರದ ಪಿತಾಮಹ: ಕೆ.ಎಸ್.ಈಶ್ವರಪ್ಪ

Update: 2019-11-26 16:23 GMT

ಬಳ್ಳಾರಿ, ನ.26: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಹಿಂದೆ ಜನತಾ ಪಕ್ಷದಲ್ಲಿದ್ದರು. ಆನಂತರ, ಜೆಡಿಎಸ್‌ಗೆ ಸೇರ್ಪಡೆಯಾದರು. ಅಲ್ಲಿಂದ ಹೊರ ಬಂದ ಬಳಿಕ ಎಬಿಪಿಜೆಡಿ ಪಕ್ಷ ಕಟ್ಟಿದರು. ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಒಂದು ಅರ್ಥದಲ್ಲಿ ಅವರು ‘ಪಕ್ಷಾಂತರದ ಪಿತಾಮಹ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ಸೋಮವಾರ ಇಲ್ಲಿನ ಪಟೇಲ್ ನಗರದಲ್ಲಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ಬೇರೆ ಬೇರೆ ಸಮಾಜದವರನ್ನು ಬೆಳೆಸುವುದು ಇರಲಿ, ತಾವು ಪ್ರತಿನಿಧಿಸುವಂತಹ ಕುರುಬ ಸಮುದಾಯದ ನಾಯಕರನ್ನೇ ಬೆಳೆಸಲು ಮುಂದಾಗಿಲ್ಲ ಎಂದು ಟೀಕಿಸಿದರು.

ಕುರುಬ ಸಮುದಾಯದ ಮುಖಂಡರಾದ ಎಚ್.ವಿಶ್ವನಾಥ್, ಭೈರತಿ ಬಸವರಾಜು, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಹೀಗೆ ಹಲವಾರು ಮಂದಿ ನಾಯಕರನ್ನು ತುಳಿದು, ಅವರೆಲ್ಲ ಪಕ್ಷ ಬಿಟ್ಟು ಹೋಗುವಂತೆ ಮಾಡಿದ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ ಎಂದು ಈಶ್ವರಪ್ಪ ಕಿಡಿಗಾರಿದರು.

ಆದರೆ, ಬಿಜೆಪಿ ಪಕ್ಷದಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಎಲ್ಲ ಸಮಾಜಗಳಿಗೂ ಮಾನ್ಯತೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಹೇಳುವಂತೆ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನಮ್ಮೆಲ್ಲರ ಆಶಯವು ಆಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಸಂಸದ ವೈ.ದೇವೆಂದ್ರಪ್ಪ, ಶಾಸಕರಾದ ರಾಜೂಗೌಡ, ಸೋಮಶೇಖರ್ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News