ವಿದ್ಯಾರ್ಥಿ ವೇತನ ಬಿಡುಗಡೆ ಮಾಡದಿದ್ದರೆ ಉಗ್ರ ಹೋರಾಟ: ಎಚ್ಚರಿಕೆ

Update: 2019-11-26 16:29 GMT

ಬೆಂಗಳೂರು, ನ.26: ರಾಜ್ಯ ಸರಕಾರವು ಪ್ರಸಕ್ತ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವೇತನವನ್ನು ನಿಲ್ಲಿಸಿದ್ದು, ಈ ಕೂಡಲೇ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಒತ್ತಾಯಿಸಿದೆ.

ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ಪ್ರಸಕ್ತ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿಗೆ ಅಯವ್ಯಯದಲ್ಲಿ ಸಾಕಷ್ಟು ಹಣವಿಲ್ಲದ ಕಾರಣ ಹೊಸ ವಿದ್ಯಾರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ರಾಜ್ಯ ಸರಕಾರ ಸೂತ್ತೋಲೆ ಹೊರಡಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಒಕ್ಕೂಟವು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ನೀಡಿ, ಈ ಬಗ್ಗೆ ಪ್ರಸ್ತಾಪ ಸಲ್ಲಿಸಿ ವೇತನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು. ಆದರೆ, ಈವರೆಗೂ ಯಾವುದೇ ವಿದ್ಯಾರ್ಥಿ ವೇತನ ಬಿಡುಗಡೆಯ ಬಗ್ಗೆ ಸುತ್ತೋಲೆ ಹೊರಡಿಸಿಲ್ಲ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನ ತಂತ್ರಾಂಶ ಪೋರ್ಟಲ್‌ನಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಕೈಬಿಡಲಾಗಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪಾಲಿಗೆ ದುರದೃಷ್ಟಕರ ಸಂಗತಿಯಾಗಿದೆ. ರಾಜ್ಯ ಸರಕಾರ ಈ ಕೂಡಲೇ ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿ ವೇತನ ತಂತ್ರಾಂಶ(ಎಸ್‌ಎಸ್‌ಪಿ) ಪೋರ್ಟಲ್‌ನಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಸೇರಿಸುವಂತೆ ಅವರು ಒತ್ತಾಯಿಸಿದರು.

ಈ ಆದೇಶದಿಂದ ರಾಜ್ಯದಲ್ಲಿರುವ ಸುಮಾರು 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ. ರಾಜ್ಯ ಸರಕಾರವು ಈ ಕೂಡಲೇ 2019 -20ನೇ ಸಾಲಿನ ವಿದ್ಯಾರ್ಥಿ ವೇತನ ವಂಚಿತ ಮೆಟ್ರಿಕ್ ಪೂರ್ವ ಹೊಸ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News