ಹಿಂಬಾಗಿಲಿನಿಂದ ವಿಶ್ವವಿದ್ಯಾನಿಲಯಗಳ ಕೇಸರೀಕರಣ

Update: 2019-11-26 18:46 GMT

ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮಿಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ಸಂಘಟನೆಯು ನಿವೃತ್ತ ನ್ಯಾಯಾಧೀಶರನ್ನೂ ಒಳಗೊಂಡ ಒಂದು ಜನತಾ ನ್ಯಾಯಮಂಡಳಿಯನ್ನು ರಚಿಸಿತ್ತು. ಅದರ ಮುಂದೆ ನೂರಾರು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸಾಕ್ಷ ಹೇಳಿ ಹಸಿಹಸಿ ಸತ್ಯಗಳನ್ನು ಬಿಚ್ಚಿಟ್ಟಿದ್ದರು. ಅವುಗಳ ಆಧಾರದಲ್ಲಿ ಈ ವಿಶೇಷ ಸರಣಿಯನ್ನು ನಿರೂಪಿಸಲಾಗಿದೆ.

ಸರಕಾರ, ಆಳುವ ಪಕ್ಷ ಮತ್ತದರ ಸಂಘಟನೆಗಳಿಗೆ ನಿಷ್ಠರಾಗಿರುವ ಹಿಂಬಾಲಕರನ್ನು ವಿಶ್ವವಿದ್ಯಾನಿಲಯಗಳ ಮುಖ್ಯಸ್ಥರೂ ಸೇರಿದಂತೆ ಆಯಕಟ್ಟಿನ ಜಾಗಗಳಿಗೆ ನೇಮಕ ಮಾಡುವ ಮೂಲಕ ಹಿಂಬಾಗಿಲಿನಿಂದ ಅವುಗಳ ಕೇಸರೀಕರಣ ನಡೆಯುತ್ತಿದೆ ಎಂದು ನ್ಯಾಯಮಂಡಳಿಯ ಮುಂದೆ ನೀಡಲಾದ ಸಾಕ್ಷಗಳಿಂದ ವ್ಯಕ್ತವಾಯಿತು.

ವಿಶ್ವವಿದ್ಯಾನಿಲಯಗಳ ಮುಖ್ಯಸ್ಥರನ್ನು ಆಯ್ಕೆ ಮಾಡುವ ರೀತಿಯಿಂದಲೇ ಅವು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿವೆ ಎಂದು ಪ್ರೊ. ಅಪೂರ್ವಾನಂದ ಹೇಳಿದರು. ಈ ರೀತಿಯಾಗಿ ಆಯ್ಕೆಯಾದ ನಾಯಕರು ಯುಜಿಸಿ, ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯ ಮತ್ತು ಅವುಗಳ ರಾಜಕೀಯ ಧಣಿಗಳಿಗೆ ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆಯನ್ನು ತಾವಾಗಿಯೇ ಒಪ್ಪಿಸಿಬಿಡುತ್ತಾರೆ ಎಂದವರು ಹೇಳಿದರು.

ಎಫ್‌ಟಿಐಐ ಅಧ್ಯಕ್ಷರಾಗಿ ಗಜೇಂದ್ರ ಚೌಹಾಣ್ ಅವರ ನೇಮಕಾತಿಯನ್ನು- ಹಿಂಬಾಲಕರನ್ನು ನೇಮಕ ಮಾಡುವುದರ ಮೂಲಕ ಸಂಸ್ಥೆಯನ್ನು ಕೇಸರೀಕರಣಗೊಳಿಸುವ ಸರಕಾರದ ಯತ್ನವನ್ನಾಗಿ ಕಾಣಲಾಗಿತ್ತು ಎಂದು ಎಫ್‌ಟಿಐಐ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಹರಿಶಂಕರ್ ನಾಚಿಮುತ್ತು ಈ ಕುರಿತು ಮಾತನಾಡುತ್ತಾ ಹೇಳಿದರು. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಕ್ಯಾಂಪಸಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಮೂರು ಅವಧಿಗಳಲ್ಲಿ ಬೋಧಕ ಸಿಬ್ಬಂದಿಯಾಗಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ಮಾಜಿ ಪ್ರಾಧ್ಯಾಪಕ ಪ್ರೊ. ಸಂದೀಪ್ ಪಾಂಡೆ ಅವರು ತನ್ನ ಸಾಕ್ಷ ನೀಡುತ್ತಾ, ಕೇಂದ್ರದಲ್ಲಿ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದ ನಂತರ ಐಐಟಿ ಮಂಡಳಿಯು ಕಳುಹಿಸಿದ ಐದು ಹೆಸರುಗಳ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ, ಗಿರೀಶ್ ಚಂದ್ರ ತ್ರಿಪಾಠಿ ಅವರನ್ನು ಬಿಎಚ್‌ಯುವಿನ ಉಪಕುಲಪತಿಯಾಗಿ ಮತ್ತು ಐಐಟಿ-ಬಿಎಚ್‌ಯುವಿನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು ಎಂದು ತಿಳಿಸಿದರು. ಅನಾಮಿಕವಾಗಿ ಉಳಿಯಬಯಸಿದ ಆಹಮದಾಬಾದ್‌ನ ಗುಜರಾತ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೊಬ್ಬರು, ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿಯನ್ನು ಸಂಘ ಪರಿವಾರ ನಿಯಂತ್ರಿಸುತ್ತಿದ್ದು, ಅಧ್ಯಾಪಕರ ನೇಮಕಾತಿಯನ್ನು ಕೂಡಾ ಅದೇ ಮಾಡಿ, ನಿರ್ದೇಶಿಸುತ್ತಿದೆಯಲ್ಲದೆ, ಸಂಘ ಪರಿವಾರದ ಸಿದ್ಧಾಂತವನ್ನು ಬೆಂಬಲಿಸುವವರು ಇಲ್ಲವೇ, ಪಕ್ಷದ ಹಿನ್ನೆಲೆಯಿಂದ ಬಂದವರನ್ನು ಅಧ್ಯಾಪಕರನ್ನಾಗಿ ನೇಮಕಾತಿ ಮಾಡಲಾಗುತ್ತಿದೆ ಎಂದು ಸಾಕ್ಷ ಸಲ್ಲಿಸಿದ್ದಾರೆ. ಅದಲ್ಲದೇ, ನೇಮಕಗೊಂಡ ಉಪಕುಲಪತಿಗಳೆಲ್ಲರೂ ಕೂಡಾ ರಾಜಾರೋಷವಾಗಿ ಅಥವಾ ಮುಚ್ಚುಮರೆಯಲ್ಲಿ ಆರೆಸ್ಸೆಸ್ ಬೆಂಬಲಿಗರೆಂದು ಅವರು ಹೇಳಿದ್ದಾರೆ.

ಹೊಸದಿಲ್ಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ಸ್‌ನ ಮಾಜಿ ವಿದ್ಯಾರ್ಥಿ ರೋಹಿನ್ ಕುಮಾರ್ ಅವರು ವರದಿ ಸಲ್ಲಿಸಿ, ತಮ್ಮ ಕ್ಯಾಂಪಸಿನಲ್ಲಿ ಕೇವಲ ಬಲಪಂಥೀಯ ಬುದ್ಧಿಜೀವಿಗಳನ್ನು ಮಾತ್ರ ಉಪನ್ಯಾಸಕ್ಕೆ ಆಹ್ವಾನಿಸುತ್ತಿದ್ದು, ಈ ಜನರು ನೇರವಾಗಿ ಬಿಜೆಪಿಗೆ ಸೇರಿದವರು, ಸ್ವಪನ್ ದಾಸ್‌ಗುಪ್ತಾ, ಚಂದನ್ ಮಿತ್ರ ಮುಂತಾದವರಿಗೆ ನಿಷ್ಠರಾಗಿರುವವರು, ರಾಮ್‌ಬಹದ್ದೂರ್ ರಾಯ್ ಸೇರಿದಂತೆ ಆರೆಸ್ಸೆಸ್‌ನವರಾಗಿದ್ದು, ಅವರೆಲ್ಲಾ ತಮಗೆ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಕಲಿಸುತ್ತಾರೆ ಎಂದು ಹೇಳುತ್ತಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (ಐಐಎಂಸಿ)ನಂತಹ ಅಷ್ಟು ಪ್ರತಿಷ್ಠಿತವಾದ ಸಂಸ್ಥೆಯು ನಕಲಿ ಸುದ್ದಿಯ ಬಗ್ಗೆ ಚಿಂತಿತವಾಗಿರಬೇಕಾಗಿದ್ದ ಸಂದರ್ಭದಲ್ಲಿ, ‘‘ನಾರದ ಮೊತ್ತಮೊದಲ ಪತ್ರಕರ್ತನಾಗಿದ್ದ’’ ಎಂದು ಕಲಿಸುತ್ತಿದೆ. ಎಪ್ರಿಲ್ 2017ರಲ್ಲಿ ಸ್ವತಃ ಹಲವು ಪತ್ರಕರ್ತರಿಗೆ ಕಿರುಕುಳ ನೀಡಿದ್ದುದರ ಹೊರತಾಗಿಯೂ, ಛತ್ತೀಸ್‌ಗಡದ ಇನ್‌ಸ್ಪೆಕ್ಟರ್ ಜನರಲ್ ಎಸ್‌ಆರ್‌ಪಿ ಕಲ್ಲೂರಿ ಅವರನ್ನು ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಉಪನ್ಯಾಸ ನೀಡುವಂತೆ ಆಹ್ವಾನಿಸಲಾಗಿತ್ತು. ಇದನ್ನು ಪತ್ರಕರ್ತರು ಪ್ರತಿಭಟಿಸಿದ್ದರು ಎಂದು ರೋಹಿನ್ ಕುಮಾರ್ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಎತ್ತಿದ ಪ್ರಶ್ನೆಗಳ ಕುರಿತು ಮತ್ತು ಐಐಎಂಸಿ ಆಡಳಿತವು ಆರೆಸ್ಸೆಸ್‌ನ ‘ಚಿಂತನ ಚಿಲುಮೆ’ಯಾದ ವಿವೇಕಾನಂದ ಫೌಂಡೇಶನ್ ಜೊತೆ ಸೇರಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಕುರಿತು ಮಾಹಿತಿ ನೀಡದಂತೆ ತಡೆಯಲು ಕ್ಯಾಂಪಸಿನಲ್ಲಿಯೇ ಮೂರು ಬಾರಿ ಮಾಹಿತಿ ಹಕ್ಕು ಅಧಿಕಾರಿಗಳನ್ನು ಬದಲಿಸಲಾಗಿತ್ತು ಎಂದೂ ಅವರು ಹೇಳಿದ್ದಾರೆ.

ಭಿನ್ನಮತದ ದಮನ

ಆರೆಸ್ಸೆಸ್‌ನ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಕೇಂದ್ರ ಸರಕಾರ ತರಗತಿಗಳಲ್ಲಿ ಗದ್ದಲ ಎಬ್ಬಿಸಿ ಅಡಚಣೆಗಳನ್ನು ಉಂಟುಮಾಡುತ್ತಿದ್ದು, ಅದು ಸುದ್ದಿಯಾಗುತ್ತಿದೆ. ಈ ಅಡಚಣೆಗಳ ನಿಜ ಉದ್ದೇಶವೆಂದರೆ, ವಿಶ್ವವಿದ್ಯಾನಿಲಯದೊಳಗೆ ಅಸ್ಥಿರತೆ ಮತ್ತು ಅಭದ್ರತೆ ಉಂಟುಮಾಡಿ ತರಗತಿ ಮತ್ತು ಪಠ್ಯದ ಹೊರತಾಗಿ ಯಾವುದೇ ಇತರ ಸಂವಾದಗಳಿಗೆ ಅವಕಾಶ ಇಲ್ಲದಂತೆ ಮಾಡುವುದು ಎಂದು ಪ್ರೊ. ಅಪೂರ್ವಾನಂದ ಹೇಳಿದರು

ಲಕ್ನೊ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾದ ಕರುಣೇಶ್ ದಿವೇದಿ ಮತ್ತು ಅಂಕಿತ್ ಸಿಂಗ್ ಬಾಬು ಹೇಳಿದಂತೆ, ಅವರ ಮುಖ್ಯ ಪ್ರತಿಭಟನೆಯು ವಿಶ್ವವಿದ್ಯಾನಿಲಯದಲ್ಲಿ ಜುಲೈ 7, 2017ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದ ಬಿಜೆಪಿ ಕಾರ್ಯಕ್ರಮವಾದ ‘ಹಿಂದವೀ ಸ್ವರಾಜ್ ದಿವಸ್ 2017’ನ್ನು ಆಚರಿಸುವುದಕ್ಕೆ ವಿದ್ಯಾರ್ಥಿಗಳ ಕ್ಷೇಮ ನಿಧಿಯ 25 ಲಕ್ಷ ರೂ.ಗಳನ್ನು ಬಳಸುವುದರ ವಿರುದ್ಧವಾಗಿತ್ತು. ಇದೇ ರೀತಿಯಲ್ಲಿ ರಾಮ್ಜಾಸ್ (Ramjas ) ಕಾಲೇಜು, ಜೆಎನ್‌ಯು ಮತ್ತಿತರ ಕ್ಯಾಂಪಸುಗಳಿಂದ ಬಂದ ಸಾಕ್ಷಗಳು, ಕ್ಯಾಂಪಸ್‌ಗಳಲ್ಲಿ ಸರಕಾರದ ಬೆಂಬಲದೊಂದಿಗೆ ಎಬಿವಿಪಿಯ ಅಸ್ತಿತ್ವ ಮತ್ತು ಬಲ ಹೆಚ್ಚುತ್ತಿರುವುದನ್ನು ತೋರಿಸುತ್ತವೆ. ಹರ್ಯಾಣದ ಮಹೇಂದ್ರಗಡದಲ್ಲಿರುವ ಸೆಂಟ್ರಲ್ ಯುನಿವರ್ಸಿಟಿ ಆಫ್ ಹರ್ಯಾಣ (ಸಿಯುಎಚ್)ದ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಭಾಗದ ಡಾ. ಸ್ನೇಹ್ಸತಾ ಮಾನವ್ ಅವರು, ಕ್ಯಾಂಪಸಿನೊಳಗೆ ಮುಕ್ತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು, ಎಬಿವಿಪಿ ಮತ್ತು ಆರೆಸ್ಸೆಸ್ ನಿಷ್ಠ ವಿದ್ಯಾರ್ಥಿಗಳಿಂದ ನಡೆಯುತ್ತಿರುವ ಕಿರುಕುಳಗಳನ್ನು ಮತ್ತು ಮಹಾಶ್ವೇತಾದೇವಿಯವರ ಕತೆ ‘ದ್ರೌಪದಿ’ಯನ್ನು ಆಧರಿಸಿದ ಹಾಗೂ ಮಹಿಳೆಯರ ಮೇಲೆ ಸೈನಿಕರ ಲೈಂಗಿಕ ಹಿಂಸಾಚಾರದ ಪ್ರಶ್ನೆಯನ್ನು ಪರಿಶೀಲಿಸುವ ತಮ್ಮ ಒಂದು ನಾಟಕಕ್ಕಾಗಿ ತಾನು ಎದುರಿಸಿದ ಪ್ರತೀಕಾರದ ಕ್ರಮಗಳನ್ನು ವಿವರಿಸಿದರು.

ಕ್ಯಾಂಪಸಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಲಪಂಥೀಯ ಅಸಹಿಷ್ಣುತೆಯ ಪರಿಣಾಮವಾಗಿ ನಡೆದ ಇನ್ನೊಂದು ಕಿರುಕುಳದ ಪ್ರಕರಣವನ್ನು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ)ನ ಪ್ರಾಧ್ಯಾಪಕ ಪ್ರೊ. ನವದೀಪ್ ಮಾಥುರ್ ಮುಂದಿಟ್ಟರು. ಅವರ ವರದಿಯ ಪ್ರಕಾರ, ಅವರು ನಡೆಸುವ ಕೋರ್ಸಿಗೆ ಸಂಬಂಧಿಸಿದಂತೆ ಒಂದು ಅನಾಮಧೇಯ ದೂರನ್ನು ನೀಡಿ, ಭಾರತದ ಅಭಿವೃದ್ಧಿ ಸಂಘರ್ಷದ ವಿಷಯದಲ್ಲಿ ಅವರು ರಾಷ್ಟ್ರವಿರೋಧಿ ನಿಲುವು ತಳೆದಿದ್ದಾರೆ ಮತ್ತು ಕಾಶ್ಮೀರದ ವಿಷಯದಲ್ಲಿ ಸರಕಾರ ವಿರೋಧಿ ತಳೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಎರಡು ಸುತ್ತಿನ ವಿಚಾರಣೆ ನಡೆದು ವಿದ್ಯಾರ್ಥಿಗಳಿಂದ ಧನಾತ್ಮಕ ಪ್ರತಿಕ್ರಿಯೆ ಬಂದುದರಿಂದ ಮತ್ತು ಅವರ ವಿಭಾಗದಿಂದ ಅಪರೂಪದ ಬೆಂಬಲ ಸಿಕ್ಕಿದ್ದರಿಂದ ಕೊನೆಗೂ ದೂರನ್ನು ತಳ್ಳಿಹಾಕಲಾಯಿತು.

ವಿದ್ಯಾರ್ಥಿ ಸಂಘಗಳ ಚುನಾವಣೆಗಳು

ಪ್ರಜಾಸತ್ತಾತ್ಮಕ ವಿದ್ಯಾರ್ಥಿ ರಾಜಕೀಯವನ್ನು ದುರ್ಬಲಗೊಳಿಸುವುದು ಮತ್ತು ವಿದ್ಯಾರ್ಥಿ ಸಂಘಗಳ ಚುನಾವಣೆಗಳ ಮೇಲೆ ವಿವಿಧ ರೀತಿಯ ನಿರ್ಬಂಧಗಳನ್ನು ಹೇರುವುದರ ಮೂಲಕ ಕ್ಯಾಂಪಸಿನ ಒಳಗೆಯೇ ಪ್ರಜಾಸತ್ತಾತ್ಮಕ ಅವಕಾಶ ಮತ್ತು ಪ್ರಕ್ರಿಯೆಗಳನ್ನು ಬುಡಮೇಲು ಮಾಡುವ ಪ್ರಯತ್ನಗಳು ಹೆಚ್ಚುತ್ತಿವೆ ಎಂದು ನ್ಯಾಯಮಂಡಳಿಯ ಮುಂದೆ ಸಲ್ಲಿಸಲಾದ ಸಾಕ್ಷಗಳು ತೋರಿಸಿಕೊಟ್ಟಿವೆ.

ಬಿರ್ಲಾ-ಅಂಬಾನಿ ವರದಿಯು ವಿದ್ಯಾರ್ಥಿ ಸಂಘಗಳನ್ನು ಗುರಿಮಾಡಿದ್ದು, ಅವುಗಳನ್ನು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯೂಟಿಓ)ಯ ಕಾರ್ಯಕ್ರಮಗಳಿಗೆ, ಶಿಕ್ಷಣ ಸಂಸ್ಥೆಗಳ ಖಾಸಗೀಕರಣಕ್ಕೆ ಮತ್ತು ಶುಲ್ಕ ಏರಿಗೆಗೆ ಇರುವ ತಡೆಗೋಡೆಗಳು ಎಂಬಂತೆ ಕಂಡಿದೆ ಎಂದು ಪ್ರಾಧ್ಯಾಪಕಿ ಸುಚೇತಾ ದೇ ಹೇಳಿದರು. ಈ ವರದಿಯ ನಂತರ ಬಂದ ಲಿಂಗ್ಡೋ ಸಮಿತಿಯು ವಿವಿಧ ರೀತಿಯ ನಿರ್ಬಂಧಗಳನ್ನು ಹೇರುವುದರ ಮೂಲಕ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ರಾಜಕೀಯವನ್ನು ದುರ್ಬಲಗೊಳಿಸುವ ವಿಧಾನಗಳನ್ನು ರೂಪಿಸಿತು ಎಂದವರು ಹೇಳಿದರು.

ಇಡೀ ಚುನಾವಣಾ ಪ್ರಕ್ರಿಯೆಯು ಹೇಗೆ ಎಬಿವಿಪಿಯಂತಹ ವಿದ್ಯಾರ್ಥಿ ಸಂಘಗಳಿಗೆ ಅನುಕೂಲವಾಗುವಂತೆ ಪ್ರಭಾವ ಬೀರುತ್ತದೆ ಮತ್ತು ಹೇಗೆ ನಿಯಮಗಳು ಎಬಿವಿಪಿಯವರಲ್ಲದ ಇತರ ಸ್ಪರ್ಧಾಳುಗಳಿಗೆ ಮಾತ್ರ ಅನ್ವಯವಾಗುತ್ತವೆ ಎಂಬುದನ್ನು ಸಾಕ್ಷಗಳ ಮೂಲಕ ವರದಿ ಮಾಡಲಾಯಿತು. ಇಡೀ ಚುನಾವಣಾ ಪ್ರಕ್ರಿಯೆಯನ್ನೇ ತಾರತಮ್ಯದ ಮತ್ತು ಅಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಸಲಾಗುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಲೆಂದೇ ವಿದ್ಯಾರ್ಥಿಗಳ ವಿರುದ್ಧ ಸುಳ್ಳು ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತದೆ. ಈ ನಿಯಮದಂತೆ ಬಿಹಾರದಲ್ಲಿ ಕೇವಲ ಎಬಿವಿಪಿ ಅಭ್ಯರ್ಥಿಗಳನ್ನಷ್ಟೇ ಅಂತಿಮಗೊಳಿಸಿ ಅರ್ಹರೆಂದು ಘೋಷಿಸಲಾಯಿತು.

ಬಿಹಾರದ ಸಿವಾನ್-ಛಾಪ್ರಾ ಪ್ರದೇಶದಲ್ಲಿ ಜೆಪಿ ವಿಶ್ವವಿದ್ಯಾನಿಲಯದ ಉಪಕುಲಪತಿಯವರು ಬಿಜೆಪಿ ಸದಸ್ಯರೊಬ್ಬರ ಜೊತೆಯಲ್ಲಿ ಕುಳಿತು ಚುನಾವಣೆಗೆ ಮೊದಲು ವಿದ್ಯಾರ್ಥಿಗಳ ಸಭೆಯೊಂದನ್ನು ನಡೆಸಿದರು. ಭಾಗಲ್ಪುರದ ತಿಲ್ಕಾ ಮಾಂಜಿ ವಿಶ್ವವಿದ್ಯಾನಿಲಯದಲ್ಲಿ ದೊಡ್ಡ ಹಬ್ಬವಾದ ‘ಛಾಟ್’ ಸಮಯದಲ್ಲಿ 75 ಶೇಕಡಾ ಹಾಜರಾತಿಯ ಒತ್ತಾಯ ಹೇರಿದರು. ಇದೇ ಹೊತ್ತಿಗೆ ಚುನಾವಣೆ ನಡೆದು ಎಬಿವಿಪಿ ಗೆದ್ದಿತು. ಯಾಕೆಂದರೆ ಎಲ್ಲಾ ಅಭ್ಯರ್ಥಿಗಳು ಎಬಿವಿಪಿಯವರಾಗಿದ್ದರು. ಪಾಟ್ನಾ ವಿಶ್ವವಿದ್ಯಾನಿಲಯದ ಇನ್ನೊಂದು ಪ್ರಕರಣದಲ್ಲಿ ಒಬ್ಬ ಅಭ್ಯರ್ಥಿಗೆ ಮತಪತ್ರವನ್ನೂ ತೋರಿಸದೆ, ಕೊನೆಗೆ ಯಾರಿಗೂ ಏನನ್ನೂ ತೋರಿಸದೆ ಫಲಿತಾಂಶವನ್ನು ಘೋಷಿಸಲಾಯಿತು. ಅದರಲ್ಲಿ ಎಬಿವಿಪಿ ಮತ್ತು ಅದರ ಲಾಬಿಗೆ ಸೇರಿದವರೇ ಗೆದ್ದರು. ಬಿಹಾರದಲ್ಲಿ ಐದು ವರ್ಷಗಳ ಕಾಲ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನೇ ನಡೆಸದೇ, 2012ರ ನಂತರ 2018ರಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿ ಸಂಘವೊಂದನ್ನು ರಚಿಸಲಾಯಿತು. 2012ಕ್ಕೂ ಮೊದಲು ಚುನಾವಣೆ ನಡೆದದ್ದು 28 ವರ್ಷಗಳಿಗೆ ಮುನ್ನ ಎಂದು ಪಾಟ್ನಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮುಖೇಶ್ ಕುಮಾರ್ ತಿಳಿಸಿದರು.

ಜಾರ್ಖಂಡ್‌ನ ನೀಲಾಂಬರ್- ಪೀತಾಂಬರ್ ವಿಶ್ವವಿದ್ಯಾನಿಲಯದಲ್ಲಿ 2016-17ರಲ್ಲಿ ಎಬಿವಿಪಿಯು ಕಾಲೇಜು ಚುನಾವಣೆಯಲ್ಲಿ ಜಯಿಸಿತ್ತು. ಗೆದ್ದ ಎಬಿವಿಪಿ ಅಭ್ಯರ್ಥಿಯು ಕಾಲೇಜಿನ ಮಾಜಿ ವಿದ್ಯಾರ್ಥಿಯಾಗಿದ್ದು, ಚುನಾವಣೆಗೆ ಸ್ಪರ್ಧಿಸಲೆಂದೇ ಕಾಲೇಜಿಗೆ ಮರುಪ್ರವೇಶ ಪಡೆದಿದ್ದ ಬಗ್ಗೆ ನಂತರ ಗೊತ್ತಾಯಿತು ಎಂದು ವಿದ್ಯಾರ್ಥಿ ಪ್ರೇಮ್ ಕುಮಾರ್ ಹೇಳಿದರು.

ನೂರು ಶೇಕಡಾ ದೃಷ್ಟಿ ಕಳೆದುಕೊಂಡಿರುವ, ಐಐಟಿ-ಬಾಂಬೆಯ ವಿದ್ಯಾರ್ಥಿ ಟೋನಿ ಕುರಿಯನ್ ತಾನು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಎದುರಿಸಬೇಕಾಗಿಬಂದ ಕಷ್ಟಗಳು, ತಾರತಮ್ಯ ಮತ್ತು ಅನ್ಯಾಯ ಕ್ರಮಗಳನ್ನು ವಿವರಿಸಿದರಲ್ಲದೆ, ತನ್ನ ಸಂಸ್ಥೆಯಲ್ಲಿ ಹೇಗೆ ಅಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು. ಐಐಟಿಯಲ್ಲಿ ಇಡೀ ಚುನಾವಣಾ ಪ್ರಕ್ರಿಯೆಯನ್ನು ಆಡಳಿತ ಮಂಡಳಿಯು ನಿಯಂತ್ರಿಸುತ್ತದೆ. ವಿಶೇಷವಾಗಿ ಪ್ರಚಾರದ ಮೇಲೆ ನಿರ್ಬಂಧ ಹೇರುವುದರ ಮೂಲಕ ಮತ್ತು ಹೊರಹೋಗುತ್ತಿರುವ ವಿದ್ಯಾರ್ಥಿ ಮಂಡಳಿಯ ಮಧ್ಯಪ್ರವೇಶದ ಮೂಲಕ ಇದನ್ನು ಮಾಡಲಾಗುತ್ತದೆ. ಇಡೀ ಪ್ರಕ್ರಿಯೆಯು ಅಧಿಕಾರಶಾಹಿ ಆಣತಿಯಂತೆ ನಡೆಯುತ್ತಿದ್ದು, ಒಂದು ರೀತಿಯಲ್ಲಿ ನಿಷ್ಪ್ರಯೋಜಕ ನಾಟಕವಾಗಿ ಕಾಣುತ್ತದೆ ಎಂದು ಅವರು ಹೇಳಿದರು. ತಾನು ತನ್ನ ನಾಮಪತ್ರ ಸಲ್ಲಿಸಿದ ಬಳಿಕ ಹಿಂದಿನ ಪದಾಧಿಕಾರಿಗಳು ತನ್ನ ಅಂಗವೈಕಲ್ಯದ ನೆಲೆಯಲ್ಲಿ ತನ್ನನ್ನು ಒತ್ತಡ ಹೇರಿ ಹಿಂದೆ ಸರಿಯುವಂತೆ ಮಾಡಿದರು ಎಂದವರು ತಿಳಿಸಿದರು.

ಐಐಟಿ ಮತ್ತು ಐಐಎಂನಂತಹ ಸಂಸ್ಥೆಗಳು ಪರಿಣಾಮಕಾರಿ ವಿದ್ಯಾರ್ಥಿ ಸಂಘಗಳನ್ನು ಹೊಂದಿಲ್ಲ. ಮುಜುಗರ ಉಂಟುಮಾಡುವ ವಿಷಯಗಳನ್ನು ಎತ್ತಬಲ್ಲ ವಿದ್ಯಾರ್ಥಿ ಸಂಘಗಳ ರಚನೆ ಮತ್ತು ಅವುಗಳಿಗೆ ಮಾನ್ಯತೆ ನೀಡುವುದರ ಕುರಿತೇ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. 2014ರಲ್ಲಿ ಐಐಟಿ-ಮದ್ರಾಸ್‌ನಲ್ಲಿ ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್ (ಎಪಿಎಸ್‌ಸಿ) ಸ್ಥಾಪಿಸಲಾಯಿತು. ಅದನ್ನು ರಾಷ್ಟ್ರವಿರೋಧಿ ಎಂದು ಕರೆಯಲಾಯಿತು. ಐಐಟಿ-ಬಾಂಬೆಯಲ್ಲಿ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (ಎಪಿಪಿಎಸ್‌ಸಿ) ಸ್ಥಾಪಿಸಲಾಯಿತು. ನಿರ್ದೇಶಕರಿಗೆ ಹಲವಾರು ಬಾರಿ ಬೇಡಿಕೆ ಸಲ್ಲಿಸಿದರೂ, ತಮ್ಮ ಸಂವಿಧಾನವನ್ನು ಸಲ್ಲಿಸಿದರೂ, ಈ ತನಕ ಒಂದು ವಿದ್ಯಾರ್ಥಿ ಸಂಸ್ಥೆಯಾಗಿ ಅದಕ್ಕೆ ಮಾನ್ಯತೆ ನೀಡಲಾಗಿಲ್ಲ ಎಂದು ವಿದ್ಯಾರ್ಥಿ ಮತ್ತು ಎಪಿಪಿಎಸ್‌ಸಿ ಸದಸ್ಯ ಪಾಂನ್ಖಿ ಅಗರ್ವಾಲ್ ತನ್ನ ಲಿಖಿತ ಸಾಕ್ಷದಲ್ಲಿ ತಿಳಿಸಿದ್ದಾರೆ.

ಕ್ಯಾಂಪಸಿನೊಳಗಿನ ವಿಲಕ್ಷಣ ವಿಷಯಗಳನ್ನು ನಿಭಾಯಿಸುವ ವಿದ್ಯಾರ್ಥಿ ಸಂಸ್ಥೆಯಾದ ಸಾಥಿ (SAATHI)ಗೆ ಕೂಡಾ ಮಾನ್ಯತೆಯನ್ನು ತಡೆಹಿಡಿಯಲಾಗಿದೆ. ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮೀರಾನ್ ಹೈದರ್ ಲಿಖಿತ ಸಾಕ್ಷವೊಂದನ್ನು ಸಲ್ಲಿಸಿ, ತಮ್ಮ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಸಂಘವನ್ನು ನಿಷೇಧಿಸಲಾಗಿರುವುದರಿಂದ, ಚುನಾವಣೆ ನಡೆಸಿ, ವಿದ್ಯಾರ್ಥಿ ಸಂಘವೊಂದನ್ನು ಸ್ಥಾಪಿಸಲು ವಿದ್ಯಾರ್ಥಿಗಳು ಪಡುತ್ತಿರುವ ಸಂಕಷ್ಟವನ್ನು ವಿವರಿಸಿದರು. ಮೊದಲಿಗೆ 1996ರಲ್ಲಿ ನಿಷೇಧ ಹೇರಲಾಗಿದ್ದರೂ, 2005ರ ಡಿಸೆಂಬರ್‌ನಲ್ಲಿ ಮತ್ತೆ ಜಾಮಿಯಾ ಸ್ಟೂಡೆಂಟ್ಸ್ ಯೂನಿಯನ್ ಚುನಾವಣೆ ನಡೆದಿತ್ತು. ಆದರೆ ಹೊಸ ವಿದ್ಯಾರ್ಥಿ ಸಂಘ ರಚನೆಯಾದ ಕೆಲವೇ ತಿಂಗಳುಗಳಲ್ಲಿ ಅದನ್ನು ಬರಖಾಸ್ತುಗೊಳಿಸಲಾಗಿತ್ತು. 2006 ಮತ್ತು 2017ರ ನಡುವಿನ ಇಷ್ಟು ವರ್ಷಗಳಲ್ಲಿ ವಿದ್ಯಾರ್ಥಿಗಳು ಉಪಕುಲಪತಿ ಮತ್ತು ಯುಜಿಸಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ, ಈ ನಿಷೇಧವನ್ನು ತೆಗೆದುಹಾಕಲು ನಿರಂತರ ಪ್ರಯತ್ನ ನಡೆಸಿದ್ದರು. ಅವರು ಹೈಕೋರ್ಟಿನಲ್ಲಿ ದಾವೆಯನ್ನೂ ಹೂಡಿದ್ದರು.

ಈ ರೀತಿಯಾಗಿ ವಿಶ್ವವಿದ್ಯಾನಿಲಯಗಳಲ್ಲಿ ಸರಕಾರ ಮತ್ತು ಬಲಪಂಥೀಯ ವಿಚಾರಗಳನ್ನು ವಿರೋಧಿಸುವವರನ್ನು ದಮನಿಸಲಾಗುತ್ತಿದೆ ಎಂದು ಈ ಸಾಕ್ಷಗಳು ತೋರಿಸುತ್ತಿದ್ದು, ಇನ್ನಷ್ಟು ಸಾಕ್ಷಗಳು ಇದಕ್ಕಿಂತಲೂ ಆಘಾತಕಾರಿಯಾಗಿವೆ.

Writer - ನಿರೂಪಣೆ: ನಿಖಿಲ್ ಕೋಲ್ಪೆ

contributor

Editor - ನಿರೂಪಣೆ: ನಿಖಿಲ್ ಕೋಲ್ಪೆ

contributor

Similar News