ಗೂಂಡಾಗಿರಿ ನಡೆಸಿದವರ ಹುಟ್ಟಡಗಿಸುತ್ತೇನೆ: ಸಿಎಂ ಯಡಿಯೂರಪ್ಪ ಗರಂ
ಬೆಂಗಳೂರು, ನ. 27: ಇಲ್ಲಿನ ಹೊಸಕೋಟೆ ತಾಲೂಕಿನ ಖಾಜಿ ಹೊಸಹಳ್ಳಿಯಲ್ಲಿ ನಿನ್ನೆ ರಾತ್ರಿ ಬಿಜೆಪಿ ಕಾರ್ಯಕರ್ತನೊಬ್ಬನ ಮೇಲೆ ಪಕ್ಷೇತರ ಅಭ್ಯರ್ಥಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆನ್ನಲಾದ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಗೂಂಡಾಗಿರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಬುಧವಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗೂಂಡಾಗಿರಿ ನಡೆಸಿದವರ ಹುಟ್ಟು ಅಡಗಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಪೊಲೀಸರು ಕಾನೂನಿನ ಅನ್ವಯ ಕಠಿಣ ಕ್ರಮ ಕೈಗೊಳ್ಳಲಿದ್ದಾರೆಂದು ತಿಳಿಸಿದರು.
17 ಮಂದಿ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ ನಾನು ಸಿಎಂ ಆಗುವಂತೆ ಆಯಿತು. ಪ್ರಚಾರದಲ್ಲಿ ವಿಪಕ್ಷಗಳು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಈ ಸರಕಾರ ತೆಗೆಯುವ ಮಾತನಾಡುತ್ತಿದ್ದಾರೆ. ಸಾಮಾಜಿಕ ನ್ಯಾಯದ ಆಧಾರದ ಮೇಲೆ ನಮ್ಮ ಸರಕಾರ ಆಡಳಿತ ನಡೆಸುತ್ತಿದೆ ಎಂದು ಬಿಎಸ್‌ವೈ ಹೇಳಿದರು.
ಹೊಸಕೋಟೆ ಕ್ಷೇತ್ರ ಮಾದರಿ ಕ್ಷೇತ್ರ ಆಗಬೇಕು. ಎಂಟಿಬಿ ನಾಗರಾಜ್ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದ ಯಡಿಯೂರಪ್ಪ, ಕ್ಷೇತ್ರದ ಅಭಿವೃದ್ಧಿಗೆ ಎಷ್ಟೇ ಅನುದಾನದ ಅಗತ್ಯವಿದ್ದರೂ ನೀಡಲು ನಾನು ಸಿದ್ಧ ಎಂದು ಭರವಸೆ ನೀಡಿದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಪ್ರವಾಹ ಸಂತ್ರಸ್ತರಿಗೆ ಸಹಾಯ ಆಗಬೇಕೆಂದರೆ ಸರಕಾರ ಇರಬೇಕೆಂದು ಹೇಳುತ್ತಿದ್ದ ಜೆಡಿಎಸ್ ವರಿಷ್ಠ ದೇವೇಗೌಡ ಇದೀಗ ತಮ್ಮ ಹೇಳಿಕೆ ಬದಲಿಸಿದ್ದಾರೆ. ಸಿದ್ದರಾಮಯ್ಯನವರ ಆಟ ಮುಗಿದಿದೆ. ಇನ್ನು ಜೆಡಿಎಸ್ ಶಾಸಕರು ಈಗಾಗಲೇ ಕಿಟ್ ಸಿದ್ದಪಡಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಇರಬಾರದು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಸ್ ನಡೆಸಿವೆ. ಆದರೆ, ಡಿಸೆಂಬರ್ 9ರ ಉಪಚುನಾವಣೆ ಫಲಿತಾಂಶದ ಬಳಿಕ ಇವರ ಎಲ್ಲ ಲೆಕ್ಕಾಚಾರ ತಲೆಕೆಳಗಾಗಲಿದೆ ಎಂದ ಅವರು, ಕಾಂಗ್ರೆಸ್ ಪಕ್ಷ ಇಲ್ಲಿ ಕುಕ್ಕರ್ ಹಂಚುತ್ತಿದೆ. ಅದು ಪಕ್ಷೇತರ ಅಭ್ಯರ್ಥಿ ಚಿಹ್ನೆ. ಡಿಸೆಂಬರ್ 5ಕ್ಕೆ ಕುಕ್ಕರ್ ಸಿಡಿಯಲಿದೆ ಎಂದು ಲೇವಡಿ ಮಾಡಿದರು.
ಹೆಬ್ಬಾಳದಲ್ಲಿ ಪತಿ ಶಾಸಕ, ಹೊಸಕೋಟೆ ಕ್ಷೇತ್ರದಲ್ಲಿ ಅವರ ಪತ್ನಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಡಿ.9ರ ಫಲಿತಾಂಶದ ಬಳಿಕ ಎಲ್ಲ ಗಂಟುಮೂಟೆ ಕಟ್ಟಿಕೊಂಡು ಹೋಗಲಿದ್ದಾರೆಂದ ಅಶೋಕ್, ಬಚ್ಚೇಗೌಡ ಸೋತಾಗ ಬಿಜೆಪಿಗೆ ಕರೆತಂದು ಮಂತ್ರಿ ಮಾಡಲಾಗಿತ್ತು. ಆದರೆ ಈಗ ಅವರು ಕ್ಷೇತ್ರದಲ್ಲಿ ಕಾಣದೆ ದ್ರೋಹ ಮಾಡುತ್ತಿದ್ದಾರೆ. ಅಪ್ಪ-ಮಕ್ಕಳ ನಾಟಕ ಅಂತ್ಯವಾಗಲಿದೆ ಎಂದರು.
ಅನಿಶ್ಚಿತ ಆಡಳಿತ ಅಂತ್ಯ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ದಿಕ್ಕು-ದೆಸೆ, ಗೊತ್ತು-ಗುರಿ ಇಲ್ಲದ ಸರಕಾರ 14 ತಿಂಗಳ ಅನಿಶ್ಚಿತ ಆಡಳಿತ ಅಂತ್ಯವಾಗಿದೆ. ಇದೀಗ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಎಸ್ಸೆಂ ಕೃಷ್ಣ ಹೇಳಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಗಲಾಟೆ, ಹೊಡೆದಾಟಕ್ಕೆ ಹೆಸರಾಗಿದ್ದ ಹೊಸಕೋಟೆ ಕ್ಷೇತ್ರದ ಇದೀಗ ಬದಲಾಗಿದೆ. ಎಂಟಿಬಿ ನಾಗರಾಜ್ ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಶಾಂತಿ ನೆಲೆಸಿದೆ. ಬಿಜೆಪಿ ಸರಕಾರ ಜಾತಿ ಆಧಾರದಲ್ಲಿ ರಾಜಕಾರಣ ಮಾಡಲಿಲ್ಲ. ಎಲ್ಲ ಸಮುದಾಯದವರಿಗೆ ಹಣ ನೀಡಿದವರು ಯಡಿಯೂರಪ್ಪ ಎಂದು ತಿಳಿಸಿದರು.