ಸುಪ್ರೀಂನಿಂದಲೇ ‘ಅನರ್ಹ’ ಹಣೆಪಟ್ಟಿ ಹೊತ್ತ ಇವರಿಗೆ....: ಅನರ್ಹರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು ?

Update: 2019-11-27 13:31 GMT

ಬೆಳಗಾವಿ, ನ. 27: ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಅವರಿಗೆ ಮನುಷ್ಯತ್ವವೇ ಇಲ್ಲ. ಅವರು ಮುಗ್ಧತೆಯ ಸೋಗಿನಲ್ಲಿದ್ದಾರೆ ಎಂದು ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಂದಿಲ್ಲಿ ಟೀಕಿಸಿದ್ದಾರೆ.

ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ವೇಳೆ ಮಾತನಾಡಿದ ಅವರು, ಕುಮಟಳ್ಳಿ ಸಂಭಾವಿತ ಎಂದು ಕ್ಷೇತ್ರದ ಜನತೆ ಆಯ್ಕೆ ಮಾಡಿದ್ದರು. ಪ್ರವಾಹ ಬಂದ ವೇಳೆ ಜನರಿಗೆ ಸ್ಪಂದಿಸಲಿಲ್ಲ. ಆದರೂ ಮೈತ್ರಿ ಸರಕಾರದ ಬಗ್ಗೆ ಇವರು ಮಾತನಾಡುತ್ತಿದ್ದು, ಇವರಿಗೆ ನಾಚಿಕೆ ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಾನು ಆಗೋದಿಲ್ಲ ಎಂದೆ: ಮೈತ್ರಿ ಸರಕಾರ ರಚನೆಗೂ ಮೊದಲೇ ಬೆಳಗಾವಿ ಜಿಲ್ಲೆಯ ‘ದೊಡ್ಡವರು’ ಬಿಜೆಪಿ ಸೇರಲು ನಿರ್ಧರಿಸಿದ್ದರು. ಈ ಬಗ್ಗೆ ನಮ್ಮೊಂದಿಗೆ ಸಭೆ ನಡೆಸಿದರು. ಆದರೆ, ನಾನು ಆಗುವುದಿಲ್ಲ ಎಂದು ಸಭೆಯಿಂದ ಹೊರ ಬಂದಿದ್ದೆ ಎಂದು ನೆನಪು ಮಾಡಿಕೊಂಡರು.

ಅಥಣಿ ಕ್ಷೇತ್ರದ ಜನತೆ ಉಪಚುನಾವಣೆ ಏಕೆ ಬಂದಿದೆ ಎಂದು ಆಲೋಚಿಸಬೇಕು. ಕ್ಷೇತ್ರದಲ್ಲಿ ತೀವ್ರ ಸ್ವರೂಪದ ನೆರೆ ಮತ್ತು ಬರ ಆವರಿಸಿತ್ತು. ಆದರೆ, ಮುಂಬೈನ ಹೊಟೇಲ್‌ನಲ್ಲಿ ಆರಾಮಾಗಿದ್ದ ಕುಮಟಳ್ಳಿ ಜನರಿಗೆ ಏಕೆ ಸ್ಪಂದಿಸಲಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದರು.

ಸುಪ್ರೀಂ ಕೋರ್ಟ್‌ನಿಂದಲೇ ‘ಅನರ್ಹ’ ಹಣೆಪಟ್ಟಿ ಹೊತ್ತು ಬಂದ ಇವರಿಗೆ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಬೇಕು. ಮೈತ್ರಿ ಸರಕಾರ ಅಭಿವೃದ್ಧಿಗೆ ಸ್ಪಂದಿಸಿಲ್ಲ ಎಂದರೆ ರಾಜೀನಾಮೆ ನೀಡುವ ಅಗತ್ಯವೇನಿತ್ತು ಎಂದ ಅವರು, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News