ಪಾಪದ ಹಣದಿಂದ ಅಧಿಕಾರ ಹಿಡಿಯಲು ಹೊರಟಿದ್ದಾರೆ: ಬಿಜೆಪಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

Update: 2019-11-27 15:44 GMT

ಮಂಡ್ಯ, ನ.27: ಪಾಪದ ಹಣವನ್ನು ಸಂಗ್ರಹಿಸಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. ನಾನೂ ಪಾಪದ ಹಣ ಸಂಗ್ರಹಿಸಿ ಅಧಿಕಾರ ಉಳಿಸಿಕೊಳ್ಳಬಹುದಿತ್ತು. ಆದರೆ, ನಮ್ಮ ತಂದೆ ಅಂತಹ ಕೆಲಸವನ್ನು ಹೇಳಿಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯ ಸಂತೇಮಾಳದಲ್ಲಿ ಬುಧವಾರ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರದಲ್ಲಿ ಒಂದೇ ಒಂದು ಮಾದರಿ ಕ್ಷೇತ್ರವಾಗಿಲ್ಲ ಎಂದು ಆರೋಪಿಸಿದರು.

ಯಡಿಯೂರಪ್ಪ ಕುತಂತ್ರದಿಂದ ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದರು. ಕುರಿ, ಕೋಳಿ, ದನಗಳಂತೆ ಶಾಸಕರನ್ನು ಖರೀದಿ ಮಾಡಿದ್ದಾರೆ. ಈ ಹಿಂದೆಯೂ ಶಾಸಕರನ್ನು ಖರೀದಿ ಮಾಡಿದ್ದರು. 17 ಶಾಸಕರ ರಾಜೀನಾಮೆಗೆ ಏನೇನು ಮಾಡಿದ್ದಾರೆ ಅಂತ ಮಾಧ್ಯಮಗಳಲ್ಲಿ ಬಂದಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಬಿಜೆಪಿ ಮೂರು ತಿಂಗಳಿಂದ ಸ್ವೇಚ್ಚಾಚಾರವಾಗಿ ಅಧಿಕಾರ ನಡೆಸುತ್ತಿದೆ. ಸಿಎಂ ಈ ಚುನಾವಣೆಯಲ್ಲಿ ಹದಿನೈದಕ್ಕೆ ಹದಿನೈದು ಕ್ಷೇತ್ರಗಳಲ್ಲಿ ಗೆದ್ದಾಗಿದೆ ಅಂತ ಅಸಹಜ ಮಾತುಗಳನ್ನಾಡುತ್ತಿದ್ದಾರೆ. ದುಡ್ಡಿನ ಮದದಿಂದ ಈ ರೀತಿ ಮಾತುಗಳನ್ನಾಡುತ್ತಿದ್ದಾರೆ. ದುರಂಹಂಕಾರಕ್ಕೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಗುಡುಗಿದರು.

ಸ್ವಾಭಿಮಾನಕ್ಕೆ ಮತ ನೀಡಿ ಎಂದು ಸಿಎಂ ಯಡಿಯೂರಪ್ಪ ಹೇಳುತ್ತಿದ್ದಾರೆ. ಯಾವುದು ಸ್ವಾಮಿ ಸ್ವಾಭಿಮಾನ, ಮಾರಾಟ ಮಾಡೋದು ಸ್ವಾಭಿಮಾನವೇ? ಜನರಿಂದ ಆಯ್ಕೆಯಾಗಿ ಮಾರಿಕೊಳ್ಳೋದು ಸ್ವಾಭಿಮಾನವೇ? ಎಂದು ಅವರು ವ್ಯಂಗ್ಯವಾಡಿದರು.

ನಮ್ಮ ರೈತಪರ ಮೈತ್ರಿ ಸರಕಾರ ತೆಗೆಯಲು ಎರಡು ತಿಂಗಳ ಕಾಲ ನಮ್ಮ ಶಾಸಕರನ್ನು ಹೊಟೇಲ್‍ನಲ್ಲಿ ಬಂಧಿಸಿ ಇಟ್ಟುಕೊಂಡಿದ್ದಕ್ಕೆ ಮಹಾರಾಷ್ಟ್ರ ಮಾಜಿ ಸಿಎಂ ಪಡ್ನವಿಸ್‍ಗೆ ದೇವರು ತಕ್ಕ ಶಿಕ್ಷೆ ಕೊಟ್ಟಿದ್ದಾನೆ. ಯಡಿಯೂರಪ್ಪಗೂ ಇದೇ ರೀತಿ ಶಿಕ್ಷೆ ಮುಂದೆ ಕಾದಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ಚೆಲುವರಾಯಸ್ವಾಮಿ ನಾನು ಮಂಡ್ಯ ಜಿಲ್ಲೆ ಜನರ ಕ್ಷಮೆ ಕೇಳುವಂತೆ ಹೇಳಿದ್ದಾನೆ. ನಾನು ಕ್ಷಮೆ ಕೇಳಲು ಯಾವುದೇ ಹಿಂಜರಿಕೆ ಇಲ್ಲ. ಆದರೆ, ಯಾವ ಕಾರಣಕ್ಕೆ ನಾನು ಕ್ಷಮೆ ಕೇಳಬೇಕು? ಜಿಲ್ಲೆಗೆ ಕೊಟ್ಟಿರುವ ಅನುದಾನದ ಬಗ್ಗೆ ನಾನು ಸುಳ್ಳು ಹೇಳಬಹುದು, ಕಡತಗಳು ಸುಳ್ಳು ಹೇಳುತ್ತವೆಯೇ ಎಂದು ಅವರು ತಿರುಗೇಟು ನೀಡಿದರು.

ಕೆ.ಆರ್.ಪೇಟೆಗೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೊಡುಗೆ ಏನೂ ಇಲ್ಲ. ಹಾಸನದ ಪ್ರೀತಂಗೌಡರನ್ನೂ ಇಲ್ಲಿನ ಉಸ್ತುವಾರಿ ಮಾಡಿದ್ದಾರೆ. ಆತ ಕಾಂಗ್ರೆಸ್ ಕುತಂತ್ರದಿಂದ ಗೆದ್ದಿದ್ದು, ಮುಂದೆ ಜನ ಬುದ್ದಿ ಕಲಿಸುತ್ತಾರೆ. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲುವ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ನಾನು ಅಲ್ಲಿಗೆ ಪ್ರಚಾರಕ್ಕೆ ಹೋಗುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ಬಾಲಕೃಷ್ಣ, ಡಾ.ಕೆ.ಅನ್ನದಾನಿ, ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು, ಇತರೆ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News