×
Ad

ಕೊಲೆಗೆ ಸಂಚು: ಐವರು ಕುಖ್ಯಾತ ಆರೋಪಿಗಳ ಬಂಧನ

Update: 2019-11-27 22:13 IST

ತುಮಕೂರು,ನ.27: ಬೆಂಗಳೂರಿನ ಕುಖ್ಯಾತ ಹೈದರ್ ಗ್ಯಾಂಗ್‍ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ಐವರನ್ನು ಹೆಬ್ಬೂರು ಠಾಣೆ ಪೊಲೀಸರು ಬಂಧಿಸಿದ್ದು, ಮೂರು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ತಾಲೂಕಿಗೆ ಬರುವ ಹೈದರ್ ಗ್ಯಾಂಗ್ ಅನ್ನು ಹತ್ಯೆ ಮಾಡಲು ಸಂಚು ರೂಪಿಸಿ, ಪಿಸ್ತೂಲ್, ಜೀವಂತ ಗುಂಡುಗಳು ಹಾಗೂ ತಲವಾರು, ಡ್ರಾಗ್ಯರ್ ಗಳೊಂದಿಗೆ ಬಂದಿದ್ದರೆನ್ನಲಾದ ಬೆಂಗಳೂರು ಮೂಲದ ಝಫ್ರುದ್ದೀನ್, ಸಫೀರುದ್ದೀನ್, ಮೊಕದ್ದರ್ ಪಾಷ, ಮುಹಮದ್ ಸಲೀಂ, ಕಲೀಂ ಪಾಷ ಅವರನ್ನು ಹೆಬ್ಬೂರು ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಈ ಗ್ಯಾಂಗ್ ನಡೆಸಿದ್ದ ಮೂರು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

ಝಫ್ರುದ್ದೀನ್, ಸಫೀರುದ್ದೀನ್ ಇಬ್ಬರು ಅಣ್ಣ ತಮ್ಮಂದಿರಾಗಿದ್ದು, ಇವರ ಮೇಲೆ ಬೆಂಗಳೂರಿನ ಠಾಣೆಯಲ್ಲಿ ರೌಡಿಶೀಟರ್ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯ ಹೊನ್ನುಡಿಕೆ ಹ್ಯಾಂಡ್‍ಪೋಸ್ಟ್ ಬಳಿ ನಡೆದಿದ್ದ ಸುಲಿಗೆ, ಮಾಗಡಿಯಲ್ಲಿ ದೇವರ ವಿಗ್ರಹ ಕಳವು ಹಾಗೂ ಬೆಂಗಳೂರಿನ ಭಾರತಿ ನಗರದಲ್ಲಿ ಕಳವು ಆಗಿದ್ದ ಟಾಟಾ ಸುಮೋ ಪ್ರಕರಣವನ್ನು ಬೇಧಿಸಲಾಗಿದೆ.

ಆರೋಪಿಗಳ ಸುಳಿವು ನೀಡಿದ ಸಿಸಿಟಿವಿ: ಹೆಬ್ಬೂರು ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಸಂಚು ರೂಪಿಸಿ ಸಿಕ್ಕಿಬಿದ್ದ ಆರೋಪಿಗಳು ಬಳಸಿದ್ದ ಟಾಟಾಸುಮೋ ಬಗ್ಗೆ ಸಿಸಿ ಟಿವಿ ಮಾಹಿತಿ ಕಲೆಹಾಕಿದಾಗ, ಇತರೆ ಪ್ರಕರಣಗಳು ಪತ್ತೆಹಾಕಿದ್ದು, ಈ ಪ್ರಕರಣದ ತನಿಖೆಯನ್ನು ನಡೆಸಿದ ಹೆಬ್ಬೂರು ಠಾಣೆಯ ಸಬ್ ಇನ್‍ಸ್ಪೆಕ್ಟರ್ ಸುಂದರ್ ಹಾಗೂ ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇನ್ನೆರಡು ಪ್ರಕರಣಗಳಲ್ಲಿ ಆರೋಪಿಗಳ ಬಂಧನ: ಕುಣಿಗಲ್ ಮಹಾತ್ಮ ಗಾಂಧಿ ಕಾಲೇಜಿನಲ್ಲಿ ಕಂಪ್ಯೂಟರ್ ಕಳವು ಮಾಡಿದ್ದ ಓರ್ವ ವಯಸ್ಕ ಹಾಗೂ ನಾಲ್ಕು ಮಂದಿ ಕಾನೂನಿನ ಜೊತೆ ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಬಂಧಿಸಲಾಗಿದ್ದು, ಹಣದ ಆಸೆಗಾಗಿ ಇಂತಹ ಕೃತ್ಯದಲ್ಲಿ ತೊಡಗಿದ್ದ ಇವರಿಂದ 4 ಕಂಪ್ಯೂಟರ್ ಮತ್ತು 3800 ರೂ ನಗದು ವಶಕ್ಕೆ ಪಡೆಯಲಾಗಿದೆ. ಹಾಗೂ ದ್ವಿಚಕ್ರ ವಾಹನ ಕಳವು ಆರೋಪಿ ಲೋಕೇಶ್ ಎಂಬಾತನನ್ನು ಬಂಧಿಸಿದ್ದು, 1.50 ಲಕ್ಷ ಮೌಲ್ಯದ ಐದು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕುಣಿಗಲ್ ಠಾಣೆಯ ಪೊಲೀಸರನ್ನು ಎಸ್ಪಿ ಅವರು ಪ್ರಶಂಸಿದ್ದಾರೆ.

ಮಟ್ಕಾ ದಂಧೆ ನಿಯಂತ್ರಣ: ಜಿಲ್ಲೆಯಲ್ಲಿ ಮಟ್ಕಾ ನಿಯಂತ್ರಿಸಲು ವಿಶೇಷ ಕಾರ್ಯಾಚರಣೆ ನಡೆಸಿ ಹತ್ತು ತಿಂಗಳಲ್ಲಿ ನಾಲ್ಕು ನೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ಎರಡಕ್ಕಿಂತ ಹೆಚ್ಚಿನ ಬಾರಿ ಮಟ್ಕಾದಲ್ಲಿ ಸಿಕ್ಕಿಕೊಂಡರೆ ರೌಡಿಶೀಟರ್ ತೆಗೆಯಲಾಗುವುದು ಎಂದು ಎಸ್ಪಿ ತಿಳಿಸಿದರು.

ರೌಡಿಶೀಟರ್ ಮೇಲೆ ದಾಳಿ ಕಟ್ಟುಕತೆ: ಕರವೇ ಮುಖಂಡ ಶಂಕರ್ ಎಂಬಾತನ ಮೇಲೆ ರೌಡಿಗಳು ದಾಳಿ ನಡೆಸಿದ್ದರು ಎಂಬುದು ಕಟ್ಟುಕತೆಯಾಗಿದ್ದು, ಅಂತಹ ಯಾವುದೇ ಘಟನೆಗಳು ನಡೆದಿಲ್ಲ, ಸಾರ್ವಜನಿಕರು ಭಯಭೀತರಾಗುವುದು ಬೇಡ ಎಂದು ತಿಳಿಸಿದ ಅವರು, ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ದೃಷ್ಠಿಯಿಂದ ರಾತ್ರಿ 2 ಗಂಟೆವರೆಗೆ ಬೀಟ್ ಮಾಡುತ್ತಿದ್ದು, ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಎಸ್ಪಿ ತಿಪ್ಪೇಸ್ವಾಮಿ, ಕುಣಿಗಲ್ ಡಿಎಸ್ಪಿ ಜಗದೀಶ್ ಹಾಗೂ ಹೆಬ್ಬೂರು, ಕುಣಿಗಲ್ ಠಾಣೆಯ ಪೊಲೀಸರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News